ಚರಂಡಿಯಲ್ಲಿ ಕೊಳಚೆ ನೀರು-ರಸ್ತೆ ದುರಸ್ತಿಗೆ ಆಗ್ರಹ : ಗುರುಂಪು ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಸುಳ್ಯ: ಗುರುಂಪು ರಸ್ತೆ ಅವ್ಯವಸ್ಥೆ ಹಾಗೂ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯದೇ ದುರ್ವಾಸನೆ ಬೀರುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿಯವರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಬಶೀರ್, ಪದಾಧಿಕಾರಿಗಳಾದ ಮಹಮ್ಮದ್, ಮುಸ್ತಫ, ಜಮಾಲುದ್ದೀನ್, ವೀರೇಶ್, ಹಮೀದ್, ರಿಯಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿಷಯ ತಿಳಿದ ಆಮ್ ಆದ್ಮಿ ಪಾರ್ಟಿಯ ಅಧ್ಯಕ್ಷ ರಾಮಕೃಷ್ಣ ಬೀರಮಂಗಲ, ಸಂಚಾಲಕ ರಶೀದ್ ಜಟ್ಟಿಪಳ್ಳ, ಅಶೋಕ್ ಎಡಮಲೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರು. ಬಳಿಕ ಪೊಲೀಸರು ಆಗಮಿಸಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮೀ, ಎಂಜಿನಿಯರ್ ಶ್ರೀದೇವಿ ಆಗಮಿಸಿದರು. ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕೂಡಾ ಸ್ಥಳಕ್ಕೆ ಬಂದರು. ಚರಂಡಿಯಲ್ಲಿ ಪ್ಲಾಸ್ಟಿಕ್ ಹಾಕಿ ನೀರು ಹರಿಯದಂತೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಚರಂಡಿಯನ್ನು ತಕ್ಷಣ ದುರಸ್ತಿ ಮಾಡಲಾಗುವುದು ಎಂದವರು ಭರವಸೆ ನೀಡಿದರು.





