ಸುಳ್ಯ: ‘ರಬ್ಬರ್ ಉತ್ಪಾದನಾ ಪ್ರೋತ್ಸಾಧನ ಯೋಜನೆ’ಘೋಷಿಸಲು ಮುಖ್ಯಮಂತ್ರಿಗೆ ಮನವಿ
ಸುಳ್ಯ: ರಾಜ್ಯ ಸರ್ಕಾರದ ಈ ವರ್ಷದ ಬಜೆಟ್‌ನಲ್ಲಿ ‘ರಬ್ಬರ್ ಉತ್ಪಾದನಾ ಪ್ರೋತ್ಸಾಧನ ಯೋಜನೆ’ಯನ್ನು ಘೋಷಿಸುವಂತೆ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ್ ಜಿ ಭಿಡೆ, ಪುತ್ತೂರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ಯ ಶೆಟ್ಟಿ ಮುಖ್ಯಂತ್ರಿಗಳನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದರಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಈ ಭಾಗದ ಎಲ್ಲಾ ಶಾಸಕರೂ ಮತ್ತು ವಿಧಾನ ಪರಿಷತ್ ಸದಸ್ಯರ ಸಹಿಯೊಂದಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ರಬ್ಬರ್ ಕೃಷಿ ಇದ್ದು, 5 ಲಕ್ಷಕ್ಕೂ ಮೇಲ್ಪಟ್ಟು ಜನರು ಈ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಕಳೆದ ವರ್ಷ ಕೆಲೋ ಒಂದರ 175ರಿಂದ 240 ರೂಪಾಯಿ ಧಾರಣೆ ಇದ್ದದ್ದು, ಪ್ರಸ್ತುತ 100ಕ್ಕಿಂತಲೂ ಕೆಳಗೆ ಕುಸಿದಿದೆ. ಕೇರಳ ರಾಜ್ಯ ಸರ್ಕಾರವು ಬೆಳೆಗಾರರ ರಕ್ಷಣೆಗೋಸ್ಕರ ರಬ್ಬರ್ ಉತ್ಪಾದನಾ ಪ್ರೋತ್ಸಾಹಧನ ಯೋಜನೆಯನ್ನು ಘೋಷಿಸಿದ್ದು, 5 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ಕೃಷಿಕರಿಗೆ ಪ್ರತಿ ಕಿಲೋ ರಬ್ಬರ್‌ಗೆ 150 ರೂಪಾಯಿ ನಿಗದಿ ಮಾಡಿ, ಮಾರುಕಟ್ಟೆ ಧಾರಣೆ ಮತ್ತು ಬೆಂಬಲ ಬೆಲೆಯ ವ್ಯತ್ಯಾಸದ ಮೊಬಲಗನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಯೋಜನೆಯನ್ನು ಕಳೆದ ಸಾಲಿನಲ್ಲಿಯೇ ಘೋಷಿಸಿದ್ದು, ಅದಕ್ಕಾಗಿ 300 ಕೋಟಿಯನ್ನು ಕಾಯ್ದಿರಿಸಿದೆ. ಈ ವರ್ಷದ ಬಜೆಟ್‌ನಲ್ಲಿ ಅದನ್ನು 500 ಕೋಟಿಗೆ ಏರಿಸಿದೆ. ರಾಜ್ಯ ಸರ್ಕಾರವೂ ಇದೇ ರೀತಿಯಲ್ಲಿ ಈ ವರ್ಷದ ಬಜೆಟ್‌ನಲ್ಲಿ 100 ಕೋಟಿಯನ್ನು ಕಾಯ್ದಿರಿಸಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಲಾಗಿದೆ.





