ಮಾರ್ಚ್ 13ರಂದು ಸುಳ್ಯ ಲಯನ್ಸ್ ಕ್ಲಬ್‌ಗೆ ರಾಜ್ಯಪಾಲರ ಅಧಿಕೃತ ಭೇಟಿ
ಸುಳ್ಯ: ಲಯನ್ಸ್ ಜಿಲ್ಲಾ ರಾಜ್ಯಪಾಲರದ ಕವಿತಾ ಶಾಸ್ತ್ರಿಯವರು ಮಾ.13 ರಂದು ಸುಳ್ಯ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ್ ದೇರಪ್ಪಜ್ಜನಮನೆಯವರು ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ಪೂರ್ವಾಹ್ನ ಓಡಬಾಯಿ ಪೆಟ್ರೋಲ್ ಬಂಕ್ ಬಳಿ ಸ್ವಾಗತ ನಡೆದು ಕ್ಲಬ್ ಸದಸ್ಯರು ಮತ್ತು ಸಾರ್ವಜನಿಕರು ಮತ್ತು ಆಟೋರಿಕ್ಷಾ ಚಾಲಕ-ಮಾಲಕ ಸಂಘದೊಂದಿಗೆ ಗಾಂಧಿನಗರ ಪೆಟ್ರೋಲ್ ಬಂಕ್ ತನಕ ವಾಹನ ಮೆರವಣಿಗೆ ನಡೆಯಲಿದೆ. ನಂತರ ಉಬರಡ್ಕ ಬಳ್ಳಡ್ಕ ಎಂಬಲ್ಲಿ ಸೂಂತೋಡು ಸೂರಯ್ಯ ಗೌಡ ದಂಪತಿಗಳು ಸ್ವಂತ ನಿರ್ಮಿಸಿ ಲಯನ್ ಮುಖಾಂತರ ಸೇವೆಗೆ ನೀಡಲಿರುವ ಮಹಿಳಾ ಬಸ್ಸು ತಂಗುದಾಣದ ಉದ್ಘಾಟನೆ ನಡೆಯಲಿದೆ. ಪೇರಾಲಿನ ಅಡ್ಡಂತಡ್ಕ -ಆಲಂಕಳ್ಯ ಎಂಬಲ್ಲಿ ಅಡ್ಡಂತಡ್ಕ ದೇರಣ್ಣ ಗೌಡ ದಂಪತಿಗಳು ಐವತ್ತು ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿ ಲಯನ್ ಮೂಲಕ ಸಾರ್ವಜನಿಕ ಸೇವೆಗೆ ನೀಡಲಿರುವ ಬಸ್ ತಂಗುದಾಣದ ಉದ್ಘಾಟನೆ, ಬೊಳುಬೈಲಿನಲ್ಲಿ ನಿರ್ವಸಿತ ಬಡ ಮಹಿಳೆಗೆ ಸುಮಾರು 3ಲಕ್ಷ ರೂ ವೆಚ್ಚದಲ್ಲಿ ಲಯನ್ ಸದಸ್ಯರ ಸಹಕಾರದಿಂದ ನಿರ್ಮಿಸಿರುವ ಮನೆ ಉದ್ಘಾಟನೆ ನಡೆಯಲಿದೆ ಎಂದರು. ಸಂಪೂರ್ಣ ದುಸ್ಥಿತಿಯಲ್ಲಿದ್ದ ನಗರ ಪಂಚಾಯತ್‌ಗೊಳಪಟ್ಟ ಪಾರ್ಕನ್ನು ಲಯನ್ ಸದಸ್ಯರ ಸಹಕಾರದಿಂದ 2.10ಲಕ್ಷ ರೂ ವೆಚ್ಚದಲ್ಲಿ ನವೀಕರಿಸಿ ಆಟವಾಡಲು ಪುನರ್ ನಿರ್ಮಾಣ ಮಾಡಲಾಗಿದ್ದು ಅದರ ಉದ್ಘಾಟನೆ, ಸುಳ್ಯ ಸರಕಾರಿ ಸಮುದಾಯದತ್ತ ಆರೋಗ್ಯ ಕೇಂದ್ರದ ಬಳಿಯಿರುವ ಆಟೋ ನಿಲ್ದಾಣಕ್ಕೆ 2.50 ಲಕ್ಷ ವೆಚ್ಚದಲ್ಲಿ ಲಯನ್ ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ನಿರ್ಮಿಸಿರುವ ಮೇಲ್ಚಾವಣಿಯ ಉದ್ಘಾಟನೆ, ಲಯನ್ಸ್ ಸೇವಾ ಸದನದಲ್ಲಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯಲಿರುವ ರಕ್ತದಾನ ಶಿಬಿರಕ್ಕೆ ಭೇಟಿ ನೀಡುವರು. ಸಂಜೆ ಸುಳ್ಯ ಲಯನ್ಸ್ ಕ್ಲಬ್‌ನ ಆಡಳಿತ ಮಂಡಳಿ ಸಭೆ, ರಾಜ್ಯಪಾಲರ ಅಧಿಕೃತ ಬೇಟಿಯ ಸಭಾ ಕಾರ್ಯಕ್ರಮ ಜರಗಲಿದೆ. ಈ ಸಮಾರಂಭದಲ್ಲಿ ದೇಹದಾನ, ಲಯನ್ಸ್ ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಳ್ಳುವ 25 ನೂತನ ಸದಸ್ಯರುಗಳ ಪ್ರತಿಷ್ಠಾವಿದಿ ಬೋಧನೆಯೊಂದಿಗೆ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್‌ಗೆ 2016-17ರಲ್ಲಿ ಶತಮಾನೋತ್ವವಕ್ಕೆ ಕ್ಲಬ್‌ನಲ್ಲಿ ಕೂಡಾ 100 ಸದಸ್ಯರ ಕೊಡುಗೆ, ಜೊತೆಗೆ ಲಯನ್ ಅಡ್ಡಂತಡ್ಕ ದೇರಣ್ಣ ಗೌಡ ದಂಪತಿಗಳಿಂದ ಕರ್ಲಪ್ಪಾಡಿ ದೇವಳಕ್ಕೆ ಲಯನ್ ಮುಖಾಂತರ ರೂ 50ಸಾವಿರದ ಕೊಡುಗೆ, ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಲಯನ್ ಸೂಂತೋಡು ಸೂರಯ್ಯ ದಂಪತಿಗಳಿಂದ ಸುಳ್ಯ ಆರಕ್ಷಕ ಠಾಣೆಗೆ ಕುಡಿಯುವ ನೀರಿನ ಘಟಕದ ಕೊಡುಗೆ ನೆರವೇರಲಿದೆ ಎಂದವರು ತಿಳಿಸಿದರು. ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಪದಾಧಿಕಾರಿಗಳಾದ ಡಿ.ಟಿ.ದಯಾನಂದ, ಟಿ.ಪಿ.ಸುಲೈಮಾನ್, ರಾಧಾಕೃಷ್ಣ ಮಾಣಿಬೆಟ್ಟು, ಕೆ.ಆರ್. ಗಂಗಾಧರ್, ಪಿ.ಎಂ.ರಂಗನಾಥ್, ಲಯನೆಸ್ ಕ್ಲಬ್ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಪದಾಧಿಕಾರಿಗಳಾದ ರಾಧಾಮಣಿ, ರಮಿತ ಜಯರಾಮ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





