ಗೋತಳಿಯ ಉಳಿವಿಗಾಗಿ ಜಾಗೃತಿ ಅಗತ್ಯ, ಪಜೀರು: ಜ್ಯೋತಿಷ್ಯಜ್ಞರ ಸಮಾವೇಶದಲ್ಲಿ ಕಾಣಿಯೂರು ಶ್ರೀ

ಕೊಣಾಜೆ: ಹಿಂದಿನಿಂದಲೂ ದೇಶ ಮತ್ತು ರಾಜ್ಯದಲ್ಲಿ ಗೋವನ್ನು ತಾಯಿಯೆಂದು ಪೂಜಿಸಲಾಗುತ್ತಿದೆ. ಕೆಲವು ಮಂದಿ ಬಹಿರಂಗವಾಗಿ ಗೋಮಾಂಸ ಸೇವನೆ ಬಗ್ಗೆ ಹೇಳುತ್ತಿದ್ದರೆ, ಬಹಿರಂಗ ಬೆಂಬಲವೂ ವ್ಯಕ್ತವಾಗುತ್ತಿದೆ. ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಇತರ ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಿದಂತೆ ಗೋವನ್ನೂ ನೋಡಬೇಕಾದ ಸ್ಥಿತಿ ಬರಬಹುದು. ಇಂತಹ ಸಂದರ್ಭದಲ್ಲಿ ಗೋಹತ್ಯೆ ತಡೆ, ಗೋತಳಿಯ ಉಳಿವಿಗಾಗಿ ಜಾಗೃತಿ ಮೂಲಕ ನಿರಂತರ ಪ್ರಯತ್ನ ನಡೆಸಬೇಕು ಎಂದು ಉಡುಪಿ ಶ್ರೀ ಕಾಣಿಯೂರು ಮಠದ ನಿಕಟಪೂರ್ವ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಪಜೀರು ಗೋವನಿತಾಶ್ರಯ ಟ್ರಸ್ಟ್‌ನಲ್ಲಿ 16ನೇ ವರ್ಷಾಚರಣೆ ಅಂಗವಾಗಿ ಶನಿವಾರ ನಡೆದ ಜ್ಯೋತಿಷ್ಯಜ್ಞರ ಸಮಾವೇಶದಲ್ಲಿ ಗೋಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂದು ಗೋವುಗಳ ಸ್ಥಿತಿ ಶೋಚನೀಯವಾಗಿದೆ. ಗೋವನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುವ ದೇಶದಲ್ಲೇ ಗೋಮಾಂಸ ಭಕ್ಷಣೆ ಬಗ್ಗೆ ಬಹಿರಂಗ ಹೇಳಿಕೆ, ಬುದ್ಧಿಜೀವಿಗಳು ಬೆಂಬಲ ನೀಡುತ್ತಿರುವುದು ಖೇದಕರ ಎಂದು ಹೇಳಿದರು. ಕಾರ್ಯಕ್ರಮ ಮೊದಲು ಸ್ವಾಮೀಜಿ ಅಶ್ವಥ ನಮನ, ಗೋಪೂಜೆ ನಡೆಸಿದರು.
ಜೋತಿಷ್ಯ ಶಾಸ್ತ್ರಜ್ಞರ ಸಭೆಯಲ್ಲಿ ಮಾತನಾಡಿದ ಖ್ಯಾತ ಜ್ಯೋತಿಷಿ ವೇದಮೂರ್ತಿ ಸೂರ್ಯ ನಾರಾಯಣ ಭಟ್ ಅವರು, ಗೋವಿನ ಸೇವೆಗಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಇಂದು ನಾವು ಗೋವು ಸಂತತಿಯನ್ನು ನಾವು ರಕ್ಷಿಸಬೇಕಾದರೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಕನಿಷ್ಟ ಒಂದೊಂದು ದನವನ್ನಾದರೂ ಪ್ರೀತಿ ನಂಬಿಕೆಯಿಂದ ಸಾಕುವ ನಿರ್ಧಾರ ಮಾಡಬೇಕು. ಸಾಕಲು ಕಷ್ಟವಾಗುವುದಿದ್ದರೆ ಗೋವು ಶಾಲೆಗಳಿದಾರೂ ಸಹಾಯ ಮಾಡಬೇಕಿದೆ. ನಾವು ದೈನಂದಿನಲ್ಲಿಅದೆಷ್ಟೋ ಖರ್ಚು ಮಾಡುತ್ತೇವೆ. ಅದರಲ್ಲಿ ಒಂದು ಪಾಲನ್ನು ದನದ ಸೇವೆಗಾಗಿ ದಾನವಾಗಿ ನೀಡಿದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ ಎಂದು ಹೇಳಿದ ಅವರು ಗೋವುಗಳ ಸಂತತಿಯ ರಕ್ಷಣೆಗೆ ಹಾಗೂ ಗೋಶಾಲೆಗಳ ಉಳಿವಿಗೆ ನಾವು ಪ್ರತೊಯೊಬ್ಬರೂ ಪಣ ತೊಡಬೇಕು ಎಂದು ಹೇಳಿದರು. ಕ್ಷೇಮಾ ಮನಃಶಾಸ್ತ್ರ ವಿಭಾಗದ ಡೀನ್ ಡಾ.ಸತೀಶ್ ರಾವ್ ಧ್ವಜರೋಹಣಗೈದರು. ಸಂಸ್ಥೆಯ ಕೋಶಾಧಿಖಾರಿ ಡಾ.ಅನಂತಲಕ್ಷ್ಮೀ ಭಟ್, ಟ್ರಸ್ಟಿಗಳಾದ ಮನೋಹರ ತುಳಜಾರಾಂ, ಶ್ರೀಧರ ಭಟ್, ಅನಂತಕೃಷ್ಣ ಭಟ್, ಜೊತಿಷ್ಯಜ್ಞರ ಸಭೆಯ ಸಂಯೋಜಕ ಬಿ.ಆರ್.ಪಂಡಿತ್, ಸತ್ಯಕೃಷ್ಣ ಭಟ್, ರಘುರಾಮ ಕಾಜವ, ಚಂದ್ರಹಾಸ್ ಪೂಂಜಾ, ಜ್ಯೋತಿಷ್ಯರಾದ ಚಂದ್ರಶೇಖರ್ ಭಟ್, ಡಾ.ಪದ್ಮನಾಭ ಮರಾಠೆ, ಶಿವಪ್ರಸಾದ್ ತಂತ್ರಿ ಉಡುಪಿ, ಸೂರ್ಯಭಟ್ ಕಸೆಕೋಡಿ ಸ್ಥಳೀಯ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ ಪಜೀರುಗುತ್ತು, ಮೊದಲಾದವರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಟ್ರಸ್ಟಿ ಎಲ್.ಶ್ರೀಧರ್ ಭಟ್ ವಂದಿಸಿದರು.









