ಶಾಂತಿಪಾಲಕರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ
ವಿಶ್ವಸಂಸ್ಥೆ ವರದಿಯಲ್ಲಿ ಕಳವಳ

ವಿಶ್ವಸಂಸ್ಥೆ, ಮಾ. 5: ತನ್ನ ಶಾಂತಿಪಾಲನಾ ಪಡೆಯ ಸೈನಿಕರಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ. ಕಳೆದ ವರ್ಷ 21 ದೇಶಗಳ ಸೈನಿಕರ ವಿರುದ್ಧ 69 ಆರೋಪಗಳು ದಾಖಲಾಗಿವೆ ಎಂದು ವರದಿಯೊಂದು ತಿಳಿಸಿದೆ.
ಪ್ರಕರಣಗಳನ್ನು ನಿಭಾಯಿಸಲು ಸ್ಥಳದಲ್ಲೇ ಕೋರ್ಟ್ ಮಾರ್ಶಲ್ (ಸೇನಾ ನ್ಯಾಯಾಲಯದ ವಿಚಾರಣೆ)ಗಳನ್ನು ನಡೆಸಬೇಕು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಕರೆ ನೀಡಿದ್ದಾರೆ. ಅದೇ ವೇಳೆ, ಈ ನಿಟ್ಟಿನಲ್ಲಿ ತಾನು ಭದ್ರತಾ ಮಂಡಳಿಯ ಪ್ರಥಮ ಕರಡು ನಿರ್ಣಯವೊಂದನ್ನು ಸಿದ್ಧಪಡಿಸುತ್ತಿರುವುದಾಗಿ ಅಮೆರಿಕ ಹೇಳಿದೆ.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸೈನಿಕರ ರಾಷ್ಟ್ರೀಯತೆಗಳನ್ನು ಮೊದಲ ಬಾರಿಗೆ ಬಾನ್ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಸಂಬಂಧಪಟ್ಟ ದೇಶಗಳು ತಮ್ಮ ತಪ್ಪಿತಸ್ಥ ಸೈನಿಕರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.
ಹೆಚ್ಚಿನ ಸಂಖ್ಯೆಯ ಆರೋಪಗಳನ್ನು ಎದುರಿಸುತ್ತಿರುವುದು ಆಫ್ರಿಕ ದೇಶಗಳ ಸೈನಿಕರು ಮತ್ತು ಪೊಲೀಸರು. ಆ ದೇಶಗಳೆಂದರೆ: ಕ್ಯಾಮರೂನ್, ಕಾಂಗೊ, ತಾಂಝಾನಿಯ, ಬೆನಿನ್, ಬುರ್ಕಿನ ಫಸೊ, ಬುರುಂಡಿ, ಗ್ಯಾಬನ್, ಘಾನ, ಮಡಗಾಸ್ಕರ್, ನೈಜರ್, ನೈಜೀರಿಯ, ರುವಾಂಡ, ಸೆನೆಗಲ್ ಮತ್ತು ಟೋಗೊ.
ಕೆನಡ ಮತ್ತು ಜರ್ಮನಿಯ ಶಾಂತಿಪಾಲನಾ ಪೊಲೀಸರು ಮತ್ತು ಮೋಲ್ಡೋವ ಮತ್ತು ಸ್ಲೊವೇಕಿಯ ದೇಶಗಳ ಸೈನಿಕರ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪಗಳು ದಾಖಲಾಗಿವೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳು ಕಾರ್ಯಾಚರಣೆ ನಡೆಸಿದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಲೈಂಗಿಕ ದೌರ್ಜನ್ಯಗಳು ವರದಿಯಾಗಿದ್ದವು. ಅದೇ ವೇಳೆ, ಐವರಿ ಕೋಸ್ಟ್, ಮಾಲಿ ಮತ್ತು ಇತರ ಆರು ದೇಶಗಳಿಂದಲೂ ದೌರ್ಜನ್ಯಗಳು ವರದಿಯಾಗಿವೆ.
ಬದಲಾವಣೆಯ ಹರಿಕಾರರಾಗಿ ಮಹಿಳೆಯರು: ಮೂನ್ ಕರೆ
ನ್ಯೂಯಾರ್ಕ್, ಮಾ. 5: ‘‘ಬದಲಾವಣೆಯ ಹರಿಕಾರ’’ರಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು ಎಂಬುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಕರೆ ನೀಡಿದ್ದಾರೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಮಾರ್ಚ್ 8ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮುಖ್ಯಸ್ಥರು ಈ ಕರೆ ನೀಡಿದ್ದಾರೆ.
ಜಗತ್ತಿನ ಬಡತನದ ಭಾಗಗಳಲ್ಲಿ ಹೆರಿಗೆಯ ಸಂದರ್ಭಗಳಲ್ಲಿ ಸಾಯುವ ಅಪಾಯವನ್ನು ಮಹಿಳೆಯರು ಈಗಲೂ ಎದುರಿಸುತ್ತಿದ್ದಾರೆ ಹಾಗೂ ಇಂದಿಗೂ ಬಾಲಕಿಯರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಬಾನ್‌ರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವ ವಾರ್ತಾ ಸಂಸ್ಥೆ ಹೇಳಿದೆ.







