ಸುಳ್ಯ: ಸಂಘಟಕರು ನಾಪತ್ತೆ!, ರಾಷ್ಟೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರದ್ದು

ಸುಳ್ಯದಲ್ಲಿ ಶನಿವಾರ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರದ್ದುಗೊಂಡಿದ್ದರಿಂದ ಟಿಕೆಟ್ ಖರೀದಿಸಿದ್ದರು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಯ: ಗಾಂಧಿನಗರದಲ್ಲಿ ಶನಿವಾರ ನಡೆಯಬೇಕಾಗಿದ್ದ ರಾಷ್ಟೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿದ್ದವರು ನಾಪತ್ತೆಯಾಗಿದ್ದು, ಪಂದ್ಯಾಟ ರದ್ದುಗೊಂಡ ಘಟನೆ ನಡೆದಿದೆ.
ಶಿವದುರ್ಗಾ ಸ್ಫೋಟ್ಸ್ ಕ್ಲಬ್ನ ಸುಧಾಕರ ನಾಗಪಟ್ಟಣ ಎಂಬವರು ರಾಷ್ಟೀಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿದ್ದು, ಶನಿವಾರ ರಾತ್ರಿ ಪಂದ್ಯಾಟ ನಡೆಯಬೇಕಾಗಿತ್ತು. ದೇಶವ ವಿವಿಧಡೆಯ ಹೆಸರಾಂತ ತಂಡಗಳು ಆಗಮಿಸುವುದಾಗಿ ಸಾವಿರಾರು ರೂಪಾಯಿ ಟೆಕಟ್ಗಳನ್ನು ಮಾರಾಟ ಮಾಡಲಾಗಿತ್ತು. ಪಂದ್ಯಾಟಕ್ಕೆ ಎರಡು ವಾರದ ಹಿಂದೆಯೇ ತಯಾರಿ ನಡೆಸಿ 40,016 ಪ್ರಥಮ, 30,016 ದ್ವಿತೀಯ, 15,016 ತೃತೀಯ, 10,016 ಚತುರ್ಥ ಬಹುಮಾನದ ಮೊತ್ತ ಘೋಷಣೆಯಾಗಿತ್ತು. ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆಗೆ 4 ಲಕ್ಷ ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಸಂಘಟಕರು ಹಣ ನೀಡದೇ ಅದು ಅರ್ಧದಲ್ಲೇ ಸ್ಥಗಿತವಾಗಿತ್ತು. ಹಾಗಾಗಿ ಪಂದ್ಯಾಟ ನಡೆಯುವ ಬಗ್ಗೆ ಕ್ರೀಡಾಪ್ರೇಮಿಗಳು ಸಂಶಯ ವ್ಯಕ್ತಪಡಿಸಿದ್ದರು. ಪಂದ್ಯಾಟ ವೀಕ್ಷಣೆಗೆ ಸಾವಿರಾರು ರೂಪಾಯಿಗಳ ಟಿಕೆಟ್ ಮಾರಾಟ ಆಗಿತ್ತು. ಪಂದ್ಯಾಟದ ಅಂಕಣ ವ್ಯವಸ್ಥೆಯನ್ನು ಮಾಡಿರಲಿಲ್ಲ. ನೊಂದಾವಣೆ ಮಾಡಿದ ಕೆಲವು ತಂಡಗಳು ಆಗಮಿಸಿದ್ದವು. ಟಿಕೆಟ್ ಖರೀದಿಸಿ ವೀಕ್ಷಣೆಗೆ ಎಂದು ಬಂದವರು ಸಂಘಟಕರನ್ನು ಕಾಣದೇ ಅವರ ಮೊಬೈಲ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಸಂಘಟಕರು ನಾಪತ್ತೆಯಾಗಿದ್ದರು. ಸಂಘಟಕರು ಸಂಪರ್ಕಕಕ್ಕೆ ಲಭ್ಯರಾಗಿಲ್ಲ ಎಂದು ತಿಳಿದು ಬಂದಿದೆ.





