ಶಂಕಿತ ಲಷ್ಕರ್ ಉಗ್ರ ತುಂಡಾ ಮತ್ತು ಇತರ ಮೂವರಿಗೆ ನ್ಯಾಯಾಲಯದಿಂದ ದೋಷಮುಕ್ತಿ

ಹೊಸದಿಲ್ಲಿ,ಮಾ.5: 1997ರಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಭಯೋತ್ಪಾದರಿಗೆ ಭಾರತದೊಳಕ್ಕೆ ನುಸುಳಲು ನೆರವಾಗಿದ್ದರೆಂಬ ಆರೋಪವನ್ನು ಎದುರಿಸುತ್ತಿದ್ದ ಶಂಕಿತ ಲಷ್ಕರ್ ಬಾಂಬ್ ತಜ್ಞ ಅಬ್ದುಲ್ ಕರೀಂ ತುಂಡಾ ಮತ್ತು ಇತರ ಮೂವರನ್ನು ದಿಲ್ಲಿಯ ನ್ಯಾಯಾಲಯವೊಂದು ಶನಿವಾರ ದೋಷಮುಕ್ತಗೊಳಿಸಿದೆ. ಅವರ ವಿರುದ್ಧ ಸಾಕ್ಷಾಧಾರಗಳ ಕೊರತೆಯನ್ನು ಅದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ತುಂಡಾ(74) 26/11ರ ಮುಂಬೈ ಸ್ಫೋಟಗಳ ಬಳಿಕ ಭಾರತವು ತನಗೆ ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದ್ದ 20 ಭಯೋತ್ಪಾದಕರ ಪೈಕಿ ಓರ್ವನಾಗಿದ್ದಾನೆ. ತುಂಡಾ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ನ್ಯಾಯಾಲಯವು ಹೇಳಿತು.
ಇದು ತುಂಡಾ ದೋಷಮುಕ್ತಗೊಂಡಿರುವ,ದಿಲ್ಲಿ ಪೊಲೀಸರು ಆತನ ವಿರುದ್ಧ ದಾಖಲಿಸಿದ್ದ ನಾಲ್ಕನೆಯ ಮತ್ತು ಅಂತಿಮ ಪ್ರಕರಣವಾಗಿದೆ. ಈ ಹಿಂದೆ 1996ರಲ್ಲಿ ಆತನ ವಿರುದ್ಧ ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್‌ನ್ನು ಹೊರಡಿಸಲಾಗಿತ್ತು.
ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ತುಂಡಾ ಜೊತೆಗೆ ಆತನ ಮಾವ ಮೊಹಮ್ಮದ್ ಝಕಾರಿಯಾ ಮತ್ತು ಅವರ ನಿಕಟ ಸಹಾಯಕರೆನ್ನಲಾದ ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್ ಅವರನ್ನೂ ನ್ಯಾಯಾಲಯವು ಆರೋಪಮುಕ್ತಗೊಳಿಸಿದೆ.
ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್ ನಿಷೇಧಿತ ಲಷ್ಕರ್-ಎ-ತಯ್ಯಬಾ ಸೇರುವ ಮುನ್ನ 1994ರಲ್ಲಿ ಝಕಾರಿಯಾನ ಮೂಲಕ ತುಂಡಾನನ್ನು ಭೇಟಿಯಾಗಿದ್ದರು. ತುಂಡಾನ ಸೂಚನೆಯ ಮೇರೆಗೆ ಇತರ ಮೂವರು ಆರೋಪಿಗಳು 1997ರಲ್ಲಿ ಇಲ್ಲಿ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದೊಳಗೆ ನುಸುಳಲು ನೆರವಾಗಿದ್ದರು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು.
ತುಂಡಾನನ್ನು 2013,ಆ.16ರಂದು ಭಾರತ-ನೇಪಾಳ ಗಡಿಯ ಬನ್‌ಬಾಸಾ ಎಂಬಲ್ಲಿಂದ ಬಂಧಿಸಲಾಗಿತ್ತು. ಈತ ದೇಶಾದ್ಯಂತ 40 ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಪ.ಬಂಗಾಳದಲ್ಲಿ ತಮ್ಮ ವಿರುದ್ಧದ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲ್ಲಿನ ಪ್ರತ್ಯೇಕ ಜೈಲುಗಳಲ್ಲಿದ್ದ ಝಕಾರಿಯಾ,ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್‌ರನ್ನು ವಾರಂಟ್‌ಗಳ ಮೂಲಕ ದಿಲ್ಲಿಗೆ ಕರೆ ತಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.
ತುಂಡಾ ಕಳೆದ ವರ್ಷ ಇತರ ಮೂರು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ.







