ಕೇಂದ್ರದೊಂದಿಗೆ ಸಂಘರ್ಷ ಇಲ್ಲ, ರಾಜ್ಯದ ಹಕ್ಕು ಪ್ರತಿಪಾದನೆ: ಸಿಎಂ
ರಾಜ್ಯ ವಿಧಾನಮಂಡಲ ಅಧಿವೇಶನ

ಬೆಂಗಳೂರು, ಮಾ. 5: ಕೇಂದ್ರ ಸರಕಾರದ ಜೊತೆಗೆ ಯಾವುದೇ ಸಂಘರ್ಷ ಇಲ್ಲ. ರಾಜ್ಯದ ಹಕ್ಕು ಪ್ರತಿಪಾದನೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯ ಸರಕಾರವು ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿದಿದೆ ಎಂಬ ವಿಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ ಎಂದು ತಳ್ಳಿಹಾಕಿದರು. ಶನಿವಾರ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಕುರಿತಂತೆ ವಂದನಾ ನಿರ್ಣಯ ವೇಳೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯ ಸರಕಾರಕ್ಕೆ ಮಾರಾಟ ತೆರಿಗೆ ಹಾಗೂ ಮೌಲ್ಯ ವರ್ಧಿತ ತೆರಿಗೆಗಳನ್ನು ಹೊರತುಪಡಿಸಿ ಬೇರಾವ ಸಂಪನ್ಮೂಲಗಳಿಲ್ಲ. ಆದರೆ, ಕೇಂದ್ರ ಸರಕಾರಕ್ಕೆ ಅಬಕಾರಿ ಸುಂಕ, ಆದಾಯ, ಸೇವಾ ತೆರಿಗೆ ಹಾಗೂ ವಿವಿಧ ಕರಗಳು ಲಭಿಸಲಿವೆ ಎಂದರು.
ಇತ್ತೀಚೆಗೆ ಮಂಡಿಸಿದ ಕೇಂದ್ರ ಸಾರ್ವತ್ರಿಕ ಬಜೆಟ್‌ನಲ್ಲಿ ಶೇಕಡ ಅರ್ಧದಷ್ಟು ಸೇವಾ ತೆರಿಗೆ ವಿಧಿಸಿರುವುದು ಕೇಂದ್ರ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ದೊರೆಯುತ್ತಿದೆ. ಇದರಲ್ಲಿ ರಾಜ್ಯ ಸರಕಾರಕ್ಕೆ ಯಾವುದೇ ಪಾಲಿಲ್ಲ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಕಚ್ಚಾ ತೈಲದ ಬೆಲೆಯ ಹಿನ್ನೆಲೆಯಲ್ಲೂ ಕೇಂದ್ರಕ್ಕೆ ಲಾಭವಾಗಿದೆ.
ಆದರೆ, ಹದಿನಾಲ್ಕನೇ ಹಣಕಾಸು ಆಯೋಗದ ಪರಿಣಾಮ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನ ಬಿಡುಗಡೆಯಲ್ಲಿ 4,689 ಕೋಟಿ ರೂ.ಕಡಿತ ಉಂಟಾಗಿದೆ. ಹಣ ವಿಕೇಂದ್ರೀಕರಣದ ಹಂಚಿಕೆಯಲ್ಲಿಯೂ 1,987 ಕೋಟಿ ರೂ.ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯದ 137ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದು ರಾಜ್ಯವು ಸಲ್ಲಿಸಿದ 3,830 ಕೋಟಿ ರೂ.ಪರಿಹಾರಕ್ಕೆ ಪ್ರತಿಯಾಗಿ ರಾಷ್ಟ್ರೀಯ ವಿಪತ್ತು ನಿವಾರಣಾ ನಿಧಿಯ ಮಾರ್ಗಸೂಚಿಗಳನ್ವಯ ಕೇಂದ್ರ ಸರಕಾರ ಒದಗಿಸಿದ 1,530 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಉಳಿಕೆ ಮೊತ್ತ್ತವನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡುತ್ತೇವೆಯೇ ಹೊರತು ಸಂಘರ್ಷ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.





