ಮೀಸಲಾತಿ ಮಸೂದೆ ಅಂಗೀಕಾರಗೊಳ್ಳುವವರೆಗೆ ಹೆಚ್ಚು ಮಹಿಳೆಯರ ನಾಮಕರಣಕ್ಕೆ ಅನ್ಸಾರಿ ಸಲಹೆ

ಹೊಸದಿಲ್ಲಿ.ಮಾ.5: ಮಹಿಳಾ ಮೀಸಲಾತಿ ಮಸೂದೆಯ ಶೀಘ್ರ ಅಂಗೀಕಾರವನ್ನು ಪ್ರತಿಪಾದಿಸಿದ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು, ಈ ಬಗ್ಗೆ ಶಾಸನವು ಜಾರಿಗೆ ಬರುವವರೆಗೆ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳ ನಾಮಕರಣವನ್ನು ಸ್ವಯಂಪ್ರೇರಿತವಾಗಿ ಹೆಚ್ಚಿಸುವಂತೆ ಶನಿವಾರ ಇಲ್ಲಿ ರಾಜಕೀಯ ಪಕ್ಷಗಳಿಗೆ ಸೂಚಿಸಿದರು.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಕೇವಲ 146 ಮಹಿಳೆಯರನ್ನು ಕಣಕ್ಕಿಳಿಸಿದ್ದು, ಇದು ಒಟ್ಟೂ ಅಭ್ಯರ್ಥಿಗಳ ಸಂಖ್ಯೆ(1,591)ಯ ಶೇ.9.17ರಷ್ಟಿತ್ತು ಎಂದು ಬೆಟ್ಟು ಮಾಡಿದ ಅವರು, ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನ ಸಭೆಗಳ ಮತ್ತು ಸಂಸದೀಯ ಸಮಿತಿಗಳಲ್ಲಿ ತೀವ್ರ ಲಿಂಗ ಅಸಮತೋಲನವಿದೆ ಎಂದು ವಿಷಾದಿಸಿದರು.
ಇಲ್ಲಿ ಎರಡು ದಿನಗಳ ಮಹಿಳಾ ಶಾಸಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಮಹಿಳೆಯರಿಗೆ ಮತದಾನದ ಸಾಂವಿಧಾನಿಕ ಹಕ್ಕು ನೀಡುವುದು ಒಂದು ವಿಷಯವಾಗಿದ್ದರೆ, ರಾಜ್ಯವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯರ ಅಧಿಕಾರ ಮತ್ತು ಪ್ರಭಾವವನ್ನು ಹೆಚ್ಚಿಸುವುದು ಬೇರೆಯದೇ ವಿಷಯವಾಗಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.47ರಷ್ಟು ಮತದಾರರು ಮಹಿಳೆಯರೇ ಆಗಿದ್ದರೂ ಅಧಿಕಾರದ ಹುದ್ದೆಗಳಲ್ಲಿ ಅದರ ಪೂರ್ಣ ಪ್ರತಿಫಲನಕ್ಕೆ ಪುರುಷ ಪ್ರಾಧಾನ್ಯತೆ ಮತ್ತು ಸಾಮಾಜಿಕ ಕಟ್ಟುಪಾಡುಗಳು ಅಡ್ಡಿಯಾಗಿವೆ ಎಂದರು. ಪಂಚಾಯತ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಶೇ.43ಕ್ಕೆ ಹೆಚ್ಚಿಸಲಾಗಿದ್ದರೂ ಅದು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರ ಸಂಖ್ಯೆ ಹೆಚ್ಚುವಂತೆ ಮಾಡಿಲ್ಲ ಎಂದು ಅವರು ಬೆಟ್ಟು ಮಾಡಿದರು.
ಸಾಮಾನ್ಯವಾಗಿ ಹೆಚ್ಚಿನ ಮಹಿಳಾ ಸದಸ್ಯರನ್ನು ಮಹಿಳೆಯರ ವಿಷಯಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಗಳಿಗೆ ಮಾತ್ರ ನಾಮಕರಣ ಮಾಡಲಾಗುತ್ತದೆ ಎಂದ ಅನ್ಸಾರಿ,ಎಲ್ಲ ವಿಷಯಗಳಲ್ಲಿ ಅವರು ಹೆಚ್ಚಿನ ಅಧಿಕಾರವಾಣಿ ಹೊಂದಿರುವಂತಾಗಲು ಕಾನೂನು ರೂಪಕರು ಮತ್ತು ಪಕ್ಷ ನಾಯಕತ್ವಗಳು ಶ್ರಮಿಸಬೇಕಾಗಿದೆ ಎಂದು ಹೇಳಿದರು.







