ಸ್ವಸ್ಥ ದೇಹ, ಚುರುಕು ಬುದ್ಧಿಗೆ ಸೈಕ್ಲಿಂಗ್ ವರ: ಅಣ್ಣಾಮಲೈ

ಉಡುಪಿ, ಮಾ.5: ಸೈಕ್ಲಿಂಗ್‌ನಿಂದ ಹಲವು ರೀತಿಯ ಉಪಯೋಗಗಳಿವೆ. ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಹಾಗೂ ಚುರುಕು ಬುದ್ಧಿಗೆ ಅದು ಸಹಕಾರಿ. ಅದೇ ರೀತಿ ಸೈಕ್ಲಿಂಗ್‌ನಿಂದ ವಾತಾವರಣ ಮಾಲಿನ್ಯರಹಿತವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ಹೇಳಿದ್ದಾರೆ.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕ್ಯಾಂಪಸ್‌ನ್ನು ‘ಗ್ರೀನ್ ಕ್ಯಾಂಪಸ್’ ಆಗಿ ಮಾಡುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ವಿಶಾಲವಾದ ಎಂಐಟಿ ಕ್ಯಾಂಪಸ್ ಒಳಗೆ ಸೈಕಲ್‌ನ್ನು ಬಳಸಲು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಿಸಲಾದ ‘ದಿ ಬೈಕ್ ಫಾರ್ಮಾ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾನು ವಿದ್ಯಾರ್ಥಿಯಾಗಿದ್ದಾಗ ಆರು ವರ್ಷಗಳ ಕಾಲ ಸತತವಾಗಿ ಸೈಕಲ್‌ನ್ನು ಬಳಸುತ್ತಿದ್ದೆ. ಇದರಿಂದ ಸೈಕ್ಲಿಂಗ್ ನನಗೆ ಈಗಲೂ ಇಷ್ಟ. ಹೀಗಾಗಿಯೇ ಕಳೆದ ತಿಂಗಳು ತಾನು ಅತ್ಯಾಧುನಿಕ ಸೈಕಲ್ ಒಂದು ಖರೀದಿಸಿದ್ದು, ಅದನ್ನೀಗ ಹೆಚ್ಚಾಗಿಯೇ ಬಳಸುತ್ತಿದ್ದೇನೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಮಾತನಾಡಿ ಎಂಐಟಿಯನ್ನು ಗ್ರೀನ್ ಕ್ಯಾಂಪಸ್ ಆಗಿ ಮಾಡುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇಲ್ಲಿ ನಿಮಗೆ ಬೇಕಾದ ತಾಂತ್ರಿಕತೆಯ ಸೈಕಲ್‌ಗಳೂ ದೊರೆಯುತ್ತದೆ. ಅದನ್ನು ಇಲ್ಲೇ ದುರಸ್ತಿ ಮಾಡಿಸಿಕೊಳ್ಳಬಹುದು ಅಥವಾ ನೀವೇ ಬಂದು ರಿಪೇರಿ ಮಾಡಬಹುದು ಎಂದರಲ್ಲದೆ, ಬೈಕ್ ಫಾರ್ಮಾದಿಂದ ಮೊದಲ ಬೈಸಿಕಲ್‌ನ್ನು ಖರೀದಿಸಿದರು.
ಈ ಸಂದರ್ಭ ಅರ್ಧ ಶತಮಾನ ಕ್ಕಿಂತಲೂ ಅಧಿಕ ಸಮಯದಿಂದ ಸೈಕಲ್‌ನ್ನು ದೈನಂದಿನ ಪ್ರಯಾಣಕ್ಕೆ ಬಳಸಿ 87ರ ಹರೆಯದಲ್ಲೂ ಆರೋಗ್ಯಪೂರ್ಣವಾಗಿದ್ದು, ಈಗಲೂ ಪ್ರತಿದಿನ ಸೈಕಲ್‌ನಲ್ಲೇ ಓಡಾಡುವ ಬ್ರಹ್ಮಾವರ ಸಮೀಪದ ಚೇರ್ಕಾಡಿಯ ನಿವೃತ್ತ ಅಧ್ಯಾಪಕ ಸೂರೆಬೆಟ್ಟು ವೆಂಕಟರಮಣ ಸಾವಂತರನ್ನು ಗೌರವಿಸಲಾಯಿತು.
ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ, ಮುಖ್ಯ ವಾರ್ಡನ್ ಕರ್ನಲ್ ಸಿ.ಎಂ.ಎಸ್. ಕಲಕೋಟಿ, ಬೈಕ್ ಫಾರ್ಮ್‌ನ ಆಡಳಿತ ನಿರ್ದೇಶಕ ಶೇನ್ ಮಚಾದೋ ಉಪಸ್ಥಿತರಿದ್ದರು. ಅಲೆನ್ ವಿನಯ ಲೂವಿಸ್ ಸ್ವಾಗತಿಸಿದರು. ಎಂಐಟಿಯ ಸಹಾಯಕ ನಿರ್ದೇಶಕ ಡಾ.ಕೆ.ನಾರಾಯಣ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಲಕೃಷ್ಣ ಮುಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು.







