ಮತ್ಸಮೇಳದಲ್ಲಿ ಮೀನು ಖಾದ್ಯಗಳ ‘ಘಮಘಮ’!

ಮಂಗಳೂರು, ಮಾ.5: ಅಂಜಲ್, ಮಾಂಜಿ, ಬಂಗುಡೆ ಫ್ರೈ, ಸಿಗಡಿ ಚಟ್ನಿ, ಕ್ರಿಸ್ಪಿ-ಚುರುಮುರಿಯಾದ ಬಾಯಲ್ಲಿ ನೀರೂರಿಸುವ ಮೀನುಗಳ ಖಾದ್ಯಗಳು. ಇದು ಭಾರತದ ಅತೀದೊಡ್ಡ ಮೀನು ಹಬ್ಬ ‘ಮತ್ಸ ಮೇಳ’ದ ಅಂಗವಾಗಿ ನಡೆದ ಆಹಾರದ ಮೇಳದ ವಿಶೇಷತೆಗಳು. ಸ್ವಾದಿಷ್ಟಕರ ಹಾಗೂ ತಾಜಾ ಮೀನುಗಳ ಬಿಸಿ ಬಿಸಿ ಖಾದ್ಯಗಳು ಘಮಘಮ ಪರಿಮಳದೊಂದಿಗೆ ಮೇಳಕ್ಕೆ ಆಗಮಿಸುವರನ್ನು ಸೆಳೆಯುತ್ತಿವೆ.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್ ಮತ್ತು ಕರ್ನಾಟಕ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಶುಕ್ರವಾರ ಆರಂಭಗೊಂಡ ‘ಮತ್ಸಮೇಳ’ಕ್ಕೆ ಆಗಮಿಸುವವರು ಈ ಮೀನು ಖಾದ್ಯಗಳ ಸವಿಯುಂಡು, ತಾಜಾ ಮೀನುಗಳನ್ನು ಖರೀದಿಸಿ ಕೊಂಡೊಯ್ಯುವ ದೃಶ್ಯ ಮೇಳದ ಎರಡನೆ ದಿನವಾದ ಶನಿವಾರವೂ ಕಂಡು ಬಂತು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯುತ್ತಿರುವ ಮೀನಿನ ಆಹಾರ ಮತ್ತು ಖಾದ್ಯಗಳ ಮಳಿಗೆಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ‘‘ಮೊದಲ ದಿನವಾದ ಶುಕ್ರವಾರದಂದು 80 ಸಾವಿರ ರೂ.ಗೂ ಅಧಿಕ ಮೀನು ಖಾದ್ಯಗಳು ಹಾಗೂ ತಾಜಾ ಮೀನುಗಳ ವ್ಯಾಪಾರ ನಡೆದಿದ್ದರೆ, ಶನಿವಾರದಂದು ಲಕ್ಷ ರೂ.ಗಳಿಗೂ ಮೀರಿದ ವ್ಯವಹಾರ ನಡೆದಿದೆ. ಕೆಎಫ್‌ಡಿಸಿಯ ರುಚಿಕರ ಹಾಗೂ ಆರೋಗ್ಯಭರಿತ ಮೀನಿನ ವಿವಿಧ ಖಾದ್ಯಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’’ ಎಂದು ಕೆಎಫ್‌ಡಿಸಿ ಮಂಗಳೂರು ಘಟಕದ ಸಹಾಯಕ ವ್ಯವಸ್ಥಾಪಕ ಮಲ್ಲೇಶ್ ಅಭಿಪ್ರಾಯಿಸಿದ್ದಾರೆ.
‘‘ಮಿತದರದಲ್ಲೇ ಗ್ರಾಹಕರಿಗೆ ಖಾದ್ಯಗಳನ್ನು ನೀಡಲಾಗುತ್ತಿದೆ. ಕೆಎಫ್‌ಡಿಸಿಯ 30 ಸಿಬ್ಬಂದಿ ಮೂಲಕ ಈ ಆಹಾರ ಮಳಿಗೆಯನ್ನು ನಿರ್ವಹಿಸಲಾಗುತ್ತಿದ್ದು, ಸ್ಥಳದಲ್ಲೇ ತಾಜಾ ಮೀನು ಖಾದ್ಯಗಳನ್ನು ಸಿದ್ಧಗೊಳಿಸಿ ನೀಡಲಾಗುತ್ತಿದೆ’’ ಎಂದು ಮಲ್ಲೇಶ್ ಹೇಳಿದರು. ಮೀನು ಸಾಕಣೆಯಲ್ಲಿ ಕೃಷಿ ಉಪ ಉತ್ಪನ್ನ ಬಳಕೆ
ಭತ್ತದ ಒಣಹುಲ್ಲನ್ನು ಕೊಳದ ನೀರಿನಲ್ಲಿ ನೇತು ಹಾಕಿ ಅದರಿಂದ ಉತ್ಪತ್ತಿಯಾಗುವ ಪೋಷಕಾಂಶಗಳನ್ನು ಮೀನು ಸಾಕಣೆಗೆ ಬಳಸುವ ವಿಧಾನ ಹಾಗೂ ಕೊಳಗಳಲ್ಲಿ ಆಯತಾಕಾರದ ಸಣ್ಣಸಣ್ಣ ಬಲೆಗಳನ್ನು ಹಾಕಿ(ಹಾಪಾ ಮೀನು ಮರಿ ಪಾಲನೆ)ಅದರೊಳಗೆ ಮೀನು ಮರಿಗಳನ್ನು ಸಾಕುವ ವಿಧಾನವೂ ‘ಮತ್ಸಮೇಳ’ದ ಪ್ರದರ್ಶನದಲ್ಲಿದೆ. ಇದರ ಜೊತೆಯಲ್ಲೇ ಮೀನುಗಾರಿಕೆಯಲ್ಲಿ ಉಪಯೋಗಿಸಲಾಗುವ ವಿವಿಧ ರೀತಿಯ ದೋಣಿಗಳು, ಇಂಜಿನ್‌ಗಳು, ಬೋಟ್‌ಗಳು, ಸಲಕರಣೆಗಳು, ಬಲೆಗಳ ಮಾದರಿಗಳ ಪ್ರದರ್ಶನದ ಜೊತೆ ಮಾಹಿತಿ ನೀಡುವ ಕಾರ್ಯಕ್ರಮವೂ ಪ್ರದರ್ಶನದಲ್ಲಿ ನಡೆಯುತ್ತಿದೆ.
ಬೆಲೆ ಸ್ವಲ್ಪ ಹೆಚ್ಚೆನಿಸಿದರೂ ಸ್ವಚ್ಛವಾದ ಹಾಗೂ ವಿನೂತನ ಶೈಲಿಯ ಮೀನಿನ ತಿನಿಸುಗಳು ಅತ್ಯುತ್ತಮವಾಗಿವೆ. ನಾವು ಮೀನುಗಳ ನಾನಾ ಬಗೆಯ ಖಾದ್ಯಗಳನ್ನು ತಿಂದಿದ್ದೇವೆ. ಆದರೆ ಈ ರೀತಿಯ ಕ್ರಿಸ್ಪಿಯಾದ ಮೀನಿನ ಖಾದ್ಯಗಳನ್ನು ನಾನು ಇದೇ ಮೊದಲು ಸವಿಯುತ್ತಿರುವುದು ಎಂದು ಮಳಿಗೆಯ ಬಳಿ ತಮ್ಮ ಸಂಬಂಧಿಕರ ಜೊತೆ ಮೀನಿನ ಖಾದ್ಯ ಸವಿಯುತ್ತಿದ್ದ ಮಂಗಳೂರಿನ ನೂರ್ ಜಹಾನ್ ಪ್ರತಿಕ್ರಿಯಿಸಿದರು.
ಚೀನಿ ಮಾದರಿ ‘ಹ್ಯಾಚರಿ’!
ಮೀನುಗಳ ಸಂತಾನೋತ್ಪತ್ತಿಗೆ ಪೂರಕವಾದ ಅವಧಿ ಮಳೆಗಾಲ. ಆ ರೀತಿಯಲ್ಲಿ ಮೀನು ಸಂತಾನೋತ್ಪತ್ತಿಗೆ ವಿಶೇಷ ವ್ಯವಸ್ಥೆಯೇ ಈ ಚೀನಿ ಮಾದರಿ ‘ಹ್ಯಾಚರಿ’. ಕೊಳದಲ್ಲಿ ಮಳೆಗಾಲದ ವಾತಾವರಣವನ್ನು ನಿರ್ಮಿಸಿ ಗರ್ಭಧಾರಣೆಗೊಂಡ ಮೀನಿನ ಮೊಟ್ಟೆಗಳನ್ನು ಮರಿ ಮಾಡಿಸುವ ವಿಧಾನ ಇದಾಗಿದೆ. ಸುಮಾರು 26 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಈ ವಾತಾವರಣದ ಕೊಳದ ನೀರಿನಲ್ಲಿ ಹಾಕಲಾದ ಮೊಟ್ಟೆಗಳು 16ರಿಂದ 18 ಗಂಟೆಗಳಲ್ಲಿ ಮರಿಯಾಗುತ್ತವೆ. ಬಳಿಕ ಶುದ್ಧವಾದ ನೀರಿನಲ್ಲಿ ಈ ಮರಿಗಳನ್ನು ಬೆಳೆಸಲಾಗುತ್ತದೆ. ಈ ಮಾದರಿಯ ಪ್ರದರ್ಶನ ಮತ್ಸ ಮೇಳದಲ್ಲಿ ಗಮನಸೆಳೆಯುತ್ತಿದೆ.







