ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕ ತಂಡಕ್ಕೆ ರೋಚಕ ಜಯ

ಮಿಲ್ಲರ್ ಚೊಚ್ಚಲ ಅರ್ಧಶತಕ
ಡರ್ಬನ್, ಮಾ.5: ಡೇವಿಡ್ ಮಿಲ್ಲರ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯದ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ.
ಬಾಲಂಗೋಚಿ ಕೈಲ್ ಅಬಾಟ್ ಕೊನೆಯ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕ ತಂಡ 4 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಲು ನೆರವಾದರು. ಔಟಾಗದೆ 53 ರನ್ ಗಳಿಸಿದ ಮಿಲ್ಲರ್ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ್ದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆ್ಯರೊನ್ ಫಿಂಚ್(40 ರನ್, 18 ಎಸೆತ) ಹಾಗೂ ಮಿಚೆಲ್ ಮಾರ್ಷ್(35) ಕೊಡುಗೆಯ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕ ತಂಡ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು.
ದಕ್ಷಿಣ ಆಫ್ರಿಕ ತಂಡ ಇತ್ತೀಚೆಗೆ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯೂ ಸೇರಿದಂತೆ ಇದೀಗ ಸತತ 5ನೆ ಗೆಲುವು ಸಾಧಿಸಿದೆ.ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದೆ.
ಮತ್ತೊಂದೆಡೆ ಆಸ್ಟ್ರೇಲಿಯ ತಂಡ ಸತತ ಐದನೆ ಬಾರಿ ಟ್ವೆಂಟಿ-20 ಪಂದ್ಯದಲ್ಲಿ ಸೋತಿದೆ. ಆಸ್ಟ್ರೇಲಿಯ 157/9: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಕ್ಕೆ ಫಿಂಚ್ ಹಾಗೂ ಡೇವಿಡ್ ವಾರ್ನರ್(20) ಬಿರುಸಿನ ಆರಂಭ ನೀಡಿದರು. ಸ್ಪಿನ್ನರ್ ಜೆಪಿ ಡುಮಿನಿ ಓವರ್‌ವೊಂದರಲ್ಲಿ 3 ಸಿಕ್ಸರ್‌ಗಳ ಸಹಿತ 24 ರನ್ ಗಳಿಸಿದ ಫಿಂಚ್ ಆಸ್ಟ್ರೇಲಿಯಕ್ಕೆ ಉತ್ತಮ ಆರಂಭ ನೀಡಿದ್ದರು.
ಆದರೆ, ಫಿಂಚ್ ಹಾಗೂ ವಾರ್ನರ್ ಬೆನ್ನುಬೆನ್ನಿಗೆ ಔಟಾದರು. ಆಸೀಸ್ ಕೇವಲ 45 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಮಾರ್ಷ್ ಆಸೀಸ್ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ದಕ್ಷಿಣ ಆಫ್ರಿಕ ಬೌಲಿಂಗ್‌ನಲ್ಲಿ ಸ್ಪಿನ್ನರ್ ಇಮ್ರಾನ್ ತಾಹಿರ್(3-21) ಯಶಸ್ವಿ ಬೌಲರ್ ಎನಿಸಿಕೊಂಡರು.
ಲಾಸ್ಟ್‌ಬಾಲ್ ಥ್ರಿಲ್: ಗೆಲ್ಲಲು ಸವಾಲಿನ ಮೊತ್ತವನ್ನು ಪಡೆದಿದ್ದ ದಕ್ಷಿಣ ಆಫ್ರಿಕ ತಂಡ ನಾಯಕ ಎಫ್‌ಡು ಪ್ಲೆಸಿಸ್(40) ಸಾಹಸದ ಹೊರತಾಗಿಯೂ 72 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತ ಕಂಡಿತು.
ಆಗ ಕ್ರೀಸ್‌ಗೆ ಇಳಿದ ಡೇವಿಡ್ ಮಿಲ್ಲರ್ 33 ಎಸೆತಗಳಲ್ಲಿ ಚೊಚ್ಚಲ ಟ್ವೆಂಟಿ-20 ಅರ್ಧಶತಕವನ್ನು ಪೂರೈಸಿ ಆಫ್ರಿಕ ಇನಿಂಗ್ಸ್‌ಗೆ ಆಸರೆಯಾದರು. ಆ್ಯಂಡ್ರೂ ಟೈ ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆಫ್ರಿಕದ ಗೆಲುವಿಗೆ 5 ರನ್ ಅಗತ್ಯವಿತ್ತು.
ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದ ಮಿಲ್ಲರ್ ಬೌಲರ್ ಅಬಾಟ್‌ಗೆ ಬ್ಯಾಟಿಂಗ್ ಅವಕಾಶ ನೀಡಿದರು. ಎರಡನೆ ಎಸೆತವನ್ನು ಬೌಂಡರಿಗೆ ಅಟ್ಟಿದ ಅಬಾಟ್ ಆಫ್ರಿಕ 19.2 ಓವರ್‌ಗಳಲ್ಲಿ 158 ರನ್ ಗಳಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 157/9
(ಆ್ಯರೊನ್ ಫಿಂಚ್ 40, ಮಿಚೆಲ್ ಮಾರ್ಷ್ 35, ಇಮ್ರಾನ್ ತಾಹಿರ್ 3-21)
ದಕ್ಷಿಣ ಆಫ್ರಿಕ: 19.2 ಓವರ್‌ಗಳಲ್ಲಿ 158/7
(ಡೇವಿಡ್ ಮಿಲ್ಲರ್ ಔಟಾಗದೆ 53, ಎಫ್‌ಡು ಪ್ಲೆಸಿಸ್ 40, ನಥನ್ ಕೌಲ್ಟರ್-ನೀಲ್ 3-29)







