ಅವಳಿ ಚಿನ್ನ ಜಯಿಸಿ ಇತಿಹಾಸ ಬರೆದ ಭಾರತ

ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಶಿಪ್
ಕೌಲಾಲಂಪುರ, ಮಾ.5: ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿರುವ ಭಾರತದ ಪುರುಷರ ಹಾಗೂ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಲಕ್ಸೆಂಬರ್ಗ್ ತಂಡವನ್ನು 3-1 ಅಂತರದಿಂದ ಮಣಿಸಿತು. ಪುರುಷರ ತಂಡ ಬ್ರೆಝಿಲ್ ತಂಡವನ್ನು 3-2 ಅಂತರದಿಂದ ಮಣಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿ ಮೊದಲ ಹಾಗೂ ಎರಡನೆ ಹಂತದಲ್ಲಿ 8 ಪಂದ್ಯಗಳನ್ನು ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿದೆ. ಪುರುಷರ ತಂಡ ನೈಜೀರಿಯ ವಿರುದ್ಧ ಸೋತ ನಂತರ ಉತ್ತಮ ಪ್ರದರ್ಶನ ನೀಡಿದೆ.
ಮಹಿಳೆಯರ ಟೀಮ್ ಫೈನಲ್‌ನಲ್ಲಿ ವೌಮಾ ದಾಸ್ ಅವರು ಡ್ಯಾನಿಯೆಲ್ ಕಾನ್ಸ್‌ಬ್ರಕ್‌ರನ್ನು 3-0 ಅಂತರದಿಂದ ಮಣಿಸಿ ತಂಡಕ್ಕೆ ಗೆಲುವಿನ ಆರಂಭ ನೀಡಿದರು. ಟೆಸ್ಸಿ ಗಾಂಡೆರಿಂಗರ್ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿರುವ ಮನಿಕಾ ಬಾತ್ರಾ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.
ಮೂರನೆ ಸಿಂಗಲ್ಸ್ ಪಂದ್ಯದಲ್ಲಿ ಕೆ. ಶಮಿನಿ ಸಾರ್ಹಾ ಡಿ ನ್ಯೂಟ್ ವಿರುದ್ದ ಸೋತರು. ಆದರೆ, ರಿವರ್ಸ್ ಸಿಂಗಲ್ಸ್‌ನಲ್ಲಿ ಡೇನಿಯಲ್‌ರನ್ನು 3-0 ಅಂತರದಿಂದ ಮಣಿಸಿದ ಮನಿಕಾ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
‘‘ನಮಗೆಲ್ಲರಿಗೂ ಇದೊಂದು ಶ್ರೇಷ್ಠ ಅನುಭವ. ಕೌಲಾಲಂಪುರದಲ್ಲಿ ಮಾಡಿರುವ ಈ ಸಾಧನೆ ಸ್ಮರಣೀಯವಾಗಿದೆ’’ ಎಂದು ಮನಿಕಾ ಬಾತ್ರಾ ಹೇಳಿದರು.
‘‘ನಾನು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಕ್ಕೆ ಸಂತೋಷವಾಗುತ್ತಿದೆ. ನಮ್ಮ ಸಾಂಘಿಕ ಪ್ರಯತ್ನ ಹಾಗೂ ಟೂರ್ನಿಯುದ್ದಕ್ಕೂ ನೀಡಿರುವ ಸ್ಥಿರ ಪ್ರದರ್ಶನ ಫಲ ನೀಡಿತು’’ ಎಂದು ವೌಮಾ ದಾಸ್ ಪ್ರತಿಕ್ರಿಯಿಸಿದರು.
ಪುರುಷರ ಟೀಮ್ ಫೈನಲ್‌ನಲ್ಲಿ ಹರ್ಮೀತ್ ದೇಸಾಯಿ ಸಾಹಸದಿಂದ ಭಾರತ ರೋಚಕ ಗೆಲುವು ಸಾಧಿಸಿತು. ಶುಕ್ರವಾರ ಪ್ರಯಾಸದ ಗೆಲುವು ದಾಖಲಿಸಿದ್ದ ಭಾರತದ ಹಿರಿಯ ಆಟಗಾರ ಅಚಂತಾ ಶರತ್ ಕಮಲ್‌ಗೆ ಬ್ರೆಝಿಲ್ ವಿರುದ್ಧದ ಫೈನಲ್ ಪಂದ್ಯಕ್ಕೆ ವಿಶ್ರಾಂತಿ ನೀಡಿತ್ತು. ಆದರೆ, ಮೊದಲ ಪಂದ್ಯದಲ್ಲಿ ಸೌಮ್ಯಜಿತ್ ಘೋಷ್ ಸೋತ ಕಾರಣ ಭಾರತ 1-2 ಹಿನ್ನಡೆ ಅನುಭವಿಸಿತ್ತು.
ರಿವರ್ಸ್ ಸಿಂಗಲ್ಸ್‌ನಲ್ಲಿ ಕಾಝೌ ಮಟ್ಸುಮೊಟೊ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿರುವ ಘೋಷ್ ಭಾರತದ ಪದಕದ ವಿಶ್ವಾಸವನ್ನು ಜೀವಂತವಾಗಿರಿಸಿದರು.
ನಿರ್ಣಾಯಕ ಪಂದ್ಯವನ್ನು ಆಡಿದ ಹರ್ಮೀತ್ 15-13 ರಿಂದ ಗೆಲುವು ಸಾಧಿಸಿ ಭಾರತದ ಪಾಳಯದಲ್ಲಿ ಸಂತಸ ತಂದರು. ನನ್ನ ಕನಸು ನನಸಾದ ಕ್ಷಣವಿದು. 2018ರಲ್ಲಿ ನಾನು ತಂಡದಲ್ಲಿ ಉಳಿದರೆ ಮೊದಲ ಬಾರಿ ಚಾಂಪಿಯನ್‌ಶಿಪ್ ಡಿವಿಜನ್ ಪಂದ್ಯದಲ್ಲಿ ಆಡಬಹುದು ಎಂದು ಶರತ್ ಪ್ರತಿಕ್ರಿಯಿಸಿದರು.







