ಭಾರತಕ್ಕೆ ಭದ್ರತಾ ತಂಡ: ಪಾಕ್ ನಿರ್ಧಾರ
ಇಸ್ಲಾಮಾಬಾದ್, ಮಾ.5: ಭಾರತದಲ್ಲಿ ಪಾಕಿಸ್ತಾನ ತಂಡಕ್ಕೆ ಮಾಡಿರುವ ಭದ್ರತೆ ಮತ್ತಿತರ ವ್ಯವಸ್ಥೆಯನ್ನು ಪರಿಶೀಲಿಸಲು ಭದ್ರತಾ ತಂಡವನ್ನು ಮುಂದಿನ ವಾರ ಕಳುಹಿಸಿಕೊಡಲಾಗುತ್ತದೆ ಎಂದು ಪಾಕಿಸ್ತಾನ ಸರಕಾರ ಶನಿವಾರ ಹೇಳಿದೆ.
ಭದ್ರತಾ ತಂಡವು ಭಾರತದಲ್ಲಿ ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಕ್ರಿಕೆಟ್ ತಂಡವನ್ನು ಕಳುಹಿಸಿಕೊಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ತಂಡ ಮಾ.8 ರಿಂದ ಎ.3ರ ತನಕ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ ವೇಳೆ ಕೋಲ್ಕತಾ, ಧರ್ಮಶಾಲಾ ಹಾಗೂ ಮೊಹಾಲಿಯಲ್ಲಿ ಮೊದಲ ಸುತ್ತಿನ ಪಂದ್ಯವನ್ನು ಆಡುತ್ತದೆ.
ಪಿಚ್ ಅಗೆದು ಹಾಕುತ್ತೇವೆ: ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯದಂತೆ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದ ಪಿಚ್ ಅನ್ನು ಅಗೆದು ಹಾಳು ಮಾಡಲಾಗುವುದು ಎಂದು ಭಯೋತ್ಪಾದನಾ ವಿರೋಧಿ ಸಂಘಟನೆಯು ಎಚ್ಚರಿಕೆ ನೀಡಿದೆ.
‘‘ಪಾಕ್ ತಂಡ ಧರ್ಮಶಾಲಾಕ್ಕೆ ಬರುವುದಕ್ಕೆ ನಮ್ಮ ವಿರೋಧವಿದೆ. ಆ ಪಂದ್ಯ ನಡೆಯಲು ನಾವು ಅವಕಾಶ ನೀಡುವುದಿಲ್ಲ. ಪಿಚ್‌ನ್ನು ಅಗೆದುಹಾಕುತ್ತೇವೆ’’ ಎಂದು ಸಂಘಟನೆಯ ಮುಖ್ಯಸ್ಥ ವೀರೇಂದ್ರ ಶಾಂಡಿಲ್ಯಾ ಬೆದರಿಕೆ ಹಾಕಿದ್ದಾರೆ.





