ಫ್ರಾನ್ಸ್‌ನ ‘ಕ್ಯಾಲೈಸ್ ಜಂಗಲ್’ ನಿರಾಶ್ರಿತ ಶಿಬಿರದಲ್ಲಿ ಬಾಲಕರ ಮೇಲೆ ಅತ್ಯಾಚಾರ
ನೆರವು ಕಾರ್ಯಕರ್ತರ ದೂರು
ಲಂಡನ್, ಮಾ. 5: ಫ್ರಾನ್ಸ್‌ನ ಕ್ಯಾಲೈಸ್ ನಗರದಲ್ಲಿ ವಲಸಿಗರಿಗಾಗಿರುವ ಶಿಬಿರ ‘ಕ್ಯಾಲೈಸ್ ಜಂಗಲ್’ನಲ್ಲಿ ಹದಿಹರೆಯದ ಬಾಲಕರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ನೆರವು ಕಾರ್ಯಕರ್ತರು ಆರೋಪಿಸಿ ದ್ದಾರೆ. ಈ ಶಿಬಿರದಲ್ಲಿ ಮಕ್ಕಳ ರಕ್ಷಣಾ ಕಾನೂನುಗಳು ಸಾಕಷ್ಟು ಪ್ರಮಾಣದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಅವರು ಬೆಟ್ಟು ಮಾಡಿದ್ದಾರೆ.
ತಮ್ಮ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಿಕೊಂಡಿರುವ 14 ಮತ್ತು 16 ವರ್ಷಗಳ ನಡುವಿನ ಏಳು ಬಾಲಕರಿಗೆ ಕಳೆದ ಆರು ತಿಂಗಳಲ್ಲಿ ತಾವು ಚಿಕಿತ್ಸೆ ನೀಡಿರುವುದಾಗಿ ಕ್ಯಾಲೈಸ್‌ನ ಹೊರವಲಯದಲ್ಲಿ ಶಿಬಿರಗಳಲ್ಲಿ ವಾಸಿಸುತ್ತಿರುವವರಿಗೆ ನೆವು ನೀಡುತ್ತಿರುವ ವೈದ್ಯಕೀಯ ಸ್ವಯಂಸೇವಕರು ‘ದ ಇಂಡಿಪೆಂಡೆಂಟ್’ಗೆ ಹೇಳಿದ್ದಾರೆ. ಅವರ ಈ ಹೇಳಿಕೆಗಳಿಗೆ ಅನುಗುಣವಾಗಿ ಅವರ ದೇಹಗಳಲ್ಲಿ ಗಾಯಗಳು ಕಂಡುಬಂದಿವೆ.
ನಾಲ್ಕು ಪ್ರಕರಣಗಳಲ್ಲಿ ಬಾಲಕರಿಗೆ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಅವರ ಪೈಕಿ ಓರ್ವ ಮಾತ್ರ ಆಸ್ಪತ್ರೆಗೆ ದಾಖಲಾದನು. ಉಳಿದವರು, ತಮ್ಮ ಮೇಲೆ ಪ್ರತೀಕಾರದ ದಾಳಿ ನಡೆಯಬಹುದು ಎಂಬ ಹೆದರಿಕೆಯಿಂದ ಅಥವಾ ತಮ್ಮ ಮೇಲೆ ನಡೆದ ದೌರ್ಜನ್ಯ ಇತರರಿಗೆ ಗೊತ್ತಾಗಿ ಅವಮಾನವಾಗುತ್ತದೆ ಎಂಬ ಭೀತಿಯಿಂದ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ ಎಂದು ನೆರವು ಕಾರ್ಯಕರ್ತರು ಹೇಳಿದರು.
ಐರೋಪ್ಯ ಒಕ್ಕೂಟದ ಕಾನೂನು ಅನುಷ್ಠಾನ ಸಂಸ್ಥೆ ‘ಯುರೋಪಾಲ್’ ಕೂಡ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕಳವವಳ ವ್ಯಕ್ತಪಡಿಸಿದೆ. ಇಡೀ ಯುರೋಪ್ ಖಂಡದಲ್ಲಿರುವ ಪಾಲಕರು ಜೊತೆಗಿರದ ನಿರಾಶ್ರಿತ ಮಕ್ಕಳು ಲೈಂಗಿಕ ದೌರ್ಜನ್ಯದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಹೆತ್ತವರು ಜೊತೆಗಿರದ ಸುಮಾರು 10,000 ಮಕ್ಕಳು ಯುರೋಪ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ಯರೋಪಾಲ್‌ನ ಹಿರಿಯ ಪ್ರತಿನಿಧಿಯೋರ್ವರು ಜನವರಿಯಲ್ಲಿ ತಿಳಿಸಿದ್ದರು.
ಶಿಬಿರದಲ್ಲಿ ಮಕ್ಕಳ ರಕ್ಷಣೆ ಕುರಿತ ಕಠಿಣ ಕಾನೂನುಗಳು ಜಾರಿಯಲ್ಲಿಲ್ಲದಿರುವುದು ಇದಕ್ಕೆ ಕಾರಣ ಎಂದು ನೆರವು ಕಾರ್ಯ ಕರ್ತರು ಹೇಳುತ್ತಾರೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಫ್ರಾನ್ಸ್‌ನ ಪೊಲೀಸರೂ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.







