ವಿದ್ಯುತ್ ವಂಚಿತ 6,000 ಗ್ರಾಮಗಳಿಗೆ ವಿದ್ಯುತ್ ಪೂರೈಕೆ: ಸರಕಾರ
ಹೊಸದಿಲ್ಲಿ,ಮಾ.5: ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುದ್ದೀಕರಣ ಕಾರ್ಯಕ್ರಮದಡಿ ಉದ್ದೇಶಿತ 18,500 ವಿದ್ಯುತ್ ವಂಚಿತ ಗ್ರಾಮಗಳ ಪೈಕಿ 6,000 ಗ್ರಾಮಗಳಿಗೆ ವಿದ್ಯುತ್‌ನ್ನು ಒದಗಿಸಲಾಗಿದೆ ಮತ್ತು ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು 39.5 ಗಿಗಾ ವ್ಯಾಟ್ಸ್‌ಗೆ ಹೆಚ್ಚಿಸಲಾಗಿದೆ. 2022ರ ವೇಳೆಗೆ ಈ ಸಾಮರ್ಥ್ಯವನ್ನು 175 ಗಿಗಾ ವ್ಯಾಟ್ಸ್‌ಗೆ ಹೆಚ್ಚಿಸುವುದು ಸರಕಾರದ ಗುರಿಯಾಗಿದೆ.
ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳ ಪ್ರಗತಿ ಪರಿಶೀಲನೆಗಾಗಿ ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ತಿಳಿಸಲಾಯಿತು. ‘‘ಎಲ್ಲರಿಗೂ ವಸತಿ’’ ಕಾರ್ಯಕ್ರಮದ ಪ್ರಗತಿಯನ್ನೂ ಪರಿಶೀಲಿಸಿದ ಮೋದಿ ಅದರ ಅನುಷ್ಠಾನ ವನ್ನು ತ್ವರಿತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್, ಕಲ್ಲಿದ್ದಲು, ವಸತಿ, ಬಂದರುಗಳು ಮತ್ತು ಡಿಜಿಟಲ್ ಇಂಡಿಯಾದಂತಹ ಕ್ಷೇತ್ರಗಳ ಪ್ರಗತಿ ಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಯಿತು. ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಮೊಬೈಲ್ ಫೋನ್ ಸಂಪರ್ಕವನ್ನು ಒದಗಿಸುವಲ್ಲಿ ಸಾಧಿಸಲಾಗಿರುವ ಪ್ರಗತಿಯನ್ನೂ ಸಭೆಯ ಅವಗಾಹನೆಗೆ ತರಲಾಯಿತು. ಈ ಗ್ರಾಮಗಳಲ್ಲಿ ಈವರೆಗೆ 1,371 ಮೊಬೈಲ್ ಗೋಪುರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಕಚೇರಿಯು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿತು. ದೇಶಾದ್ಯಂತ ಎಲ್‌ಇಡಿ ಬಲ್ಬ್‌ಗಳ ವಿತರಣೆಯಲ್ಲಿನ ಪ್ರಗತಿಯನ್ನೂ ಸಭೆಯು ಪರಿಶೀಲಿಸಿತು.







