‘ಆಲಿಗಡ ಮುಸ್ಲಿಂ ವಿವಿ’ಗೆ ರಜತ್ ಶರ್ಮಾ ಹಾಗೂ ಆರೆಸ್ಸೆಸ್‌ನ ಭಟ್ಕರ್ ಹೆಸರು ತಿರಸ್ಕರಿಸಿದ ರಾಷ್ಟ್ರಪತಿ
ಹೊಸದಿಲ್ಲಿ, ಮಾ.5: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯಲ್ಲಿ ಖಾಲಿ ಬಿದ್ದಿರುವ ಹುದ್ದೆಯೊಂದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೆಸರುಗಳನ್ನು ಸೂಚಿಸಿ ಸಲ್ಲಿಸಿದ್ದ ಕಡತವೊಂದನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಕಾರ್ಯಾಲಯ ಹಿಂದೆ ಕಳುಹಿಸಿದ್ದು, ಇನ್ನೂ ಹೆಚ್ಚು ಹೆಸರುಗಳನ್ನು ಸೂಚಿಸುವಂತೆ ಹೇಳಿದೆಯೆನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಸಚಿವಾಲಯ ನಿರಾಕರಿಸಿದೆ.
ಸಚಿವಾಲಯವು ತನ್ನ ಕಡತದಲ್ಲಿ ಇಂಡಿಯಾ ಟಿವಿ ಮುಖ್ಯ ಸಂಪಾದಕ ರಜತ್ ಶರ್ಮಾ ಮತ್ತು ಆರೆಸ್ಸೆಸ್ ಸಂಯೋಜಿತ ಸಂಸ್ಥೆ ವಿಜ್ಞಾನ ಭಾರತೀಯ ಅಧ್ಯಕ್ಷರೂ ಭಾರತದ ಮೊದಲ ಸೂಪರ್ ಕಂಪ್ಯೂಟರ್‌ನ ಶಿಲ್ಪಿಯೂ ಆಗಿರುವ ವಿಜಯ್ ಪಿ ಭಟ್ಕರ್ ಅವರ ಹೆಸರುಗಳನ್ನು ಸೂಚಿಸಿತ್ತು.
ಅಲಿಗಡ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರ್ಯಕಾರಿ ಮಂಡಳಿಯಲ್ಲಿ ಒಟ್ಟು 28 ಸದಸ್ಯರಿದ್ದರೆ ಅವರಲ್ಲಿ ಮೂವರನ್ನು ವಿಶ್ವವಿದ್ಯಾನಿಲಯದ ಸಂದರ್ಶಕರೂ ಆಗಿರುವ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಸಚಿವಾಲಯವು ನೇಮಿಸುತ್ತದೆ.
ಇನ್ನೂ ಹಲವು ಹೆಸರುಗಳನ್ನು ಚರ್ಚಿಸಿದ ಬಳಿಕ ಅಂತಿಮಗೊಳಿಸಲಾಗುವುದು. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ತಗಲುವುದು, ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರೆ, ಮತ್ತೆ ಶರ್ಮ ಹಾಗೂ ಭಟ್ಕರ್ ಅವರ ಹೆಸರುಗಳನ್ನು ಪರಿಗಣಿಸುವ ಸಾಧ್ಯತೆ ಕಡಿಮೆಯೆಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಅಲಿಗಡ ವಿಶ್ವವಿದ್ಯಾನಿಲಯ ದೇಶದ ಇತರೆಡೆ ಸ್ಥಾಪಿಸಲುದ್ದೇಶಿಸಿದ್ದ ಅಧ್ಯಯನ ಕೇಂದ್ರಗಳ ಬಗ್ಗೆ ಸಚಿವಾಲಯ ತಗಾದೆ ತೆಗೆದಿತ್ತು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹಾಗೂ ರಾಷ್ಟ್ರಪತಿಯವರು ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಹುದ್ದೆಯಿಂದ ಕೆಳಗಿಳಿಸಿರುವುದರ ವಿಚಾರವಾಗಿ ಕೂಡ ಭಿನ್ನಾಭಿಪ್ರಾಯ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.







