ಕನ್ಹಯ್ಯಾಗೆ ಜೀವ ಬೆದರಿಕೆ

ನಾಲಗೆ ಕತ್ತರಿಸಲು ಕರೆಕೊಟ್ಟ ಬಿಜೆಪಿ ಮುಖಂಡ
ಹತ್ಯೆಗೆ 11 ಲಕ್ಷ ರೂ.ಬಹುಮಾನ: ದಿಲ್ಲಿಯಲ್ಲಿ ರಾರಾಜಿಸುತ್ತಿವೆ ಪೋಸ್ಟರ್‌ಗಳು!
ಹೊಸದಿಲ್ಲಿ, ಮಾ.5: ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಬಿಡುಗಡೆಗೊಂಡ ಬಳಿಕ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಮಾಡಿದ ಭಾಷಣ ಭಾರತದಾದ್ಯಂತ ಮಿಂಚಿನ ಸಂಚಾರ ಉಂಟುಮಾಡಿದ ಬೆನ್ನಿಗೇ ಕೆಲವು ದುಷ್ಕರ್ಮಿಗಳು ಅವರಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಉತ್ತರ ಪ್ರದೇಶ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷನೋರ್ವ, ಕನ್ಹಯ್ಯಾ ಅವರ ನಾಲಗೆ ಕತ್ತರಿಸಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದರೆ, ಕೇಂದ್ರ ದಿಲ್ಲಿಯ ವಿವಿಧೆಡೆ, ಕನ್ಹಯ್ಯಾ ಕುಮಾರ್ ಅವರನ್ನು ಹತ್ಯೆ ಮಾಡಿದರೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸುವ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಪೂರ್ವಾಂಚಲ ಸೇನಾ ಹಾಗೂ ಅದರ ಅಧ್ಯಕ್ಷ ಆದರ್ಶ್ ಶರ್ಮಾ ಅವರ ಹೆಸರು ಇರುವ ಸಣ್ಣ ಪೋಸ್ಟರ್‌ಗಳು ಬಹಳಷ್ಟು ಕಡೆಗಳಲ್ಲಿ ಕಾಣಿಸಿಕೊಂಡಿದ್ದು, ಬಸ್ ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣಗಳಲ್ಲೂ ಇವೆ. ಇಂತಹ 1,500 ಪೋಸ್ಟರ್‌ಗಳನ್ನು ಹಚ್ಚಲಾಗಿದೆ ಎಂದು ಶರ್ಮಾ ಹೇಳಿಕೊಂಡಿದ್ದಾನೆ. ಕನ್ಹಯ್ಯಾ ಹುಟ್ಟೂರಾದ ಬಿಹಾರದ ಬೇಗುಸರಾಯ್ ಗ್ರಾಮದ 10 ಕಿಲೋಮೀಟರ್ ಸರಹದ್ದಿನಲ್ಲೇ ತಾನು ಇರುವುದಾಗಿ ಶರ್ಮಾ ಹೇಳಿಕೊಂಡಿದ್ದಾನೆ.
ಹಿಂದಿಯಲ್ಲಿರುವ ಈ ಭಿತ್ತಿಪತ್ರಗಳು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ದೇಶದ್ರೋಹಿ ಕನ್ಹಯ್ಯೋ ಕುಮಾರ್‌ನನ್ನು ಹತ್ಯೆ ಮಾಡಿದವರಿಗೆ 11 ಲಕ್ಷ ರೂಪಾಯಿ ಬಹುಮಾನವನ್ನು ಪೂರ್ವಾಂಚಲ ಸೇನೆ ನೀಡಲಿದೆ ಎಂದು ಸಾರುತ್ತದೆ. ಇದರಲ್ಲಿ ಆದರ್ಶ ಶರ್ಮಾ, ಪೂರ್ವಾಂಚಲದ ಮಗ ಹಾಗೂ ಪೂರ್ವಾಂ ಚಲ ಸೇನೆಯ ಅಧ್ಯಕ್ಷ ಎಂದು ಮೊಬೈಲ್ ಸಂಖ್ಯೆಯನ್ನು ಕೂಡಾ ಉಲ್ಲೇಖಿಸಲಾಗಿದೆ.
ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಜೆಎನ್‌ಯು ಕ್ಯಾಂಪಸ್‌ನಲ್ಲಿ ಮಾಡಿದ ಭಾಷಣದಲ್ಲಿ ಮೋದಿ, ಸ್ಮತಿ ಇರಾನಿಯವರ ಬಗ್ಗೆ ಕಟುವಾಗಿ ಮಾತನಾಡಿದ ಬಳಿಕ ಈ ಭಿತ್ತಿಪತ್ರಗಳು ಕಾಣಿಸಿಕೊಂಡಿವೆ.
‘‘ಮೊದಲು ನಾನು ಕೂಡಾ ಕನ್ಹಯ್ಯ ಪರವಾಗಿದ್ದೆ.ಆದರೆ ಅವರ ಎರಡನೆ ಭಾಷಣದಿಂದ ತೀವ್ರ ಅಸಮಾಧಾನ ಹೊಂದಿದ್ದೇನೆ. ಪೊಲೀಸರು ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂಬ ಅಭಿಪ್ರಾಯ ನನ್ನದಾಗಿತ್ತು. ಆದರೆ ಆತನ ಭಾಷಣ ಕೇಳಿ ಆಘಾತವಾಯಿತು. ಆತ ದೇಶ ವಿಭಜಿಸಲು ಹೊರಟಿದ್ದಾನೆ. ಆತನನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’’ ಎಂದು ಶರ್ಮಾ ಹೇಳಿದ್ದಾರೆ.
ಆತನ ಎರಡನೆ ಭಾಷಣದ ಬಳಿಕ ಪೂರ್ವಾಂಚಲದ ಸದಸ್ಯರ ಜತೆಗೆ ಚರ್ಚಿಸಿದ್ದು, ಪೋಸ್ಟರ್ ಪ್ರಕಟಿಸಲು ಹಣ ಸಂಗ್ರಹಿಸಿದೆವು. ಆತನನ್ನು ಹತ್ಯೆ ಮಾಡಿದರೆ, 11 ಲಕ್ಷ ರೂಪಾಯಿ ಸಂಗ್ರಹಿಸಿ ಬಹುಮಾನ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸಾರ್ವಜನಿಕ ಸ್ಥಳ ವಿರೂಪಗೊಳಿಸಿದ್ದಕ್ಕೆ ಶರ್ಮಾ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ಹಯ್ಯ ಅವರ ಭಾಷಣಕ್ಕೆ ಬಿಜೆಪಿ ಮುಖಂಡರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಸಹಿತ ಹಲವರು ಕನ್ಹಯ್ಯಾ ಮಾತುಗಳನ್ನು ಎತ್ತಿಹಿಡಿದಿದ್ದಾರೆ.







