ಕನ್ಹಯ್ಯಾ ಚಲನವಲನಗಳ ಬಗ್ಗೆ ಮಾಹಿತಿ ನೀಡಿ: ಜೆಎನ್‌ಯುಗೆ ದಿಲ್ಲಿ ಪೊಲೀಸರ ಸೂಚನೆ

ಹೊಸದಿಲ್ಲಿ, ಮಾ.5: ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್‌ಗೆ ಸೂಕ್ತ ಭದ್ರತೆ ನೀಡುವ ಸಲುವಾಗಿ, ಅವರು ಕ್ಯಾಂಪಸ್‌ನಿಂದ ಹೊರಗೆ ಕೈಗೊಳ್ಳುವ ಪ್ರವಾಸದ ಬಗ್ಗೆ ಹಾಗೂ ಅವರ ಭೇಟಿಯ ಸ್ವರೂಪದ ಬಗ್ಗೆ ಮಾಹಿತಿ ನೀಡಬೇಕು ಎಂದು ದಿಲ್ಲಿ ಪೊಲೀಸರು ಜವಾಹರಲಾಲ್ ನೆಹರೂ ವಿವಿ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕನ್ಹಯ್ಯ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ ಬಳಿಕ, ಈ ಸಂಬಂಧ ಪೊಲೀಸರು ವಿವಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ದಿಲ್ಲಿ ಉಪ ಪೊಲೀಸ್ ಆಯುಕ್ತ ಪ್ರೇಮನಾಥ್, ವಸಂತ್ ಕುಂಜ್ ಠಾಣಾ ವ್ಯಾಪ್ತಿಗೆ ಜೆಎನ್‌ಯು ಬರುತ್ತದೆ. ಕ್ಯಾಂಪಸ್‌ನಿಂದ ಹೊರಗೆ ಕನ್ಹಯ್ಯಾ ಕುಮಾರ್ ಭೇಟಿ ನೀಡುವುದಾದಲ್ಲಿ ಮುಂಚಿತ ವಾಗಿಯೇ ಠಾಣೆಗೆ ಮಾಹಿತಿ ನೀಡಬೇಕು, ಭೇಟಿಯ ಸ್ವರೂಪ ಹಾಗೂ ಸಾರಿಗೆ ವ್ಯವಸ್ಥೆ ಬಗ್ಗೆ ಕೂಡಾ ಮಾಹಿತಿ ಒದಗಿಸಬೇಕು. ಇದರಿಂದ ಸೂಕ್ತ ಭದ್ರತೆ ನೀಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದ ವರು ವಿವರಿಸಿದ್ದಾರೆ.
ಫೆಬ್ರವರಿ 17ರಂದು ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಕನ್ಹಯ್ಯ ಮೇಲೆ ದಾಳಿ ನಡೆದ ಬಳಿಕ ಹೈಕೋರ್ಟ್ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿವಿ ಕ್ಯಾಂಪಸ್‌ನಿಂದ ಹೊರಗೆ ಆತ ಹೋಗುವಾಗ ಪೊಲೀಸ್ ತಂಡ ಕೂಡಾ ಆತನ ಜತೆಗೆ ಸುತ್ತಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಗುರುವಾರ ಕನ್ಹಯ್ಯಾ ಜೈಲಿನಿಂದ ಬಿಡುಗಡೆಯಾದ ಬಳಿಕ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದರು. ಆತ ಸುರಕ್ಷಿತವಾಗಿ ಕ್ಯಾಂಪಸ್ ಸೇರಲು ಸೂಕ್ತ ಭದ್ರತೆ ಒದಗಿಸಿದ್ದರು.
ಜೆಎನ್‌ಯುನಲ್ಲಿ ನಡೆದ ಸಮಾರಂಭವೊಂದರಲ್ಲಿ ಕನ್ಹಯ್ಯ ಹಾಗೂ ಇತರರು ದೇಶವಿರೋಧಿ ಘೋಷಣೆ ಕೂಗಿದರು ಎಂಬ ಆರೋಪ ಹೊರಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಬಂಧಿತರಾದ ಉಮರ್ ಖಾಲಿದ್ ಹಾಗೂ ಅನಿರ್ಬಣ್ ಭಟ್ಟಾಚಾರ್ಯ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.







