ಕಳಸಾ-ಬಂಡೂರಿ ವಿವಾದ - ಪ್ರಧಾನಿ ಬಳಿ ಮತ್ತೊಮ್ಮೆ ಸರ್ವಪಕ್ಷ ನಿಯೋಗ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.5: ಮಹದಾಯಿ ಯೋಜನೆ ಕುರಿತ ಅಂತಾರಾಜ್ಯ ಜಲ ವಿವಾದವನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಕೋರಿ ಸರ್ವಪಕ್ಷ ಮುಖಂಡರ ನಿಯೋಗವನ್ನು ಪ್ರಧಾನಿಯವರ ಬಳಿ ಮತ್ತೊಮ್ಮೆ ಕರೆದೊಯ್ಯಲು ಸರಕಾರ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸಭೆಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಂತಾರಾಜ್ಯ ಜಲ ವಿವಾದ ಕಾಯ್ದೆ-1956ರ ಅಡಿಯಲ್ಲಿ ರಚಿಸಿರುವ ನ್ಯಾಯಾಧಿಕರಣದ ಮುಂದೆ ಗೋವಾ ಸಲ್ಲಿಸಿರುವ ತಕರಾರು ಅರ್ಜಿಯನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳ ಸಭೆಯನ್ನು ಕರೆದು ಮಾತುಕತೆಯ ಮೂಲಕ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಸಾಧ್ಯ ಎಂದರು.
ಹುಬ್ಬಳ್ಳಿ-ಧಾರವಾಡ ನಗರಕ್ಕೆ 7.56 ಟಿಎಂಸಿ ಕುಡಿಯುವ ನೀರು ಪೂರೈಸಲಿರುವ ಈ ಯೋಜನೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು. ಕಳೆದ ಮೂರೂವರೆ ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಚಾಲನೆ ನೀಡಬೇಕೆಂಬ ಸದುದ್ದೇಶದಿಂದ ಸರ್ವಪಕ್ಷ ಮುಖಂಡರ ನಿಯೋಗವನ್ನು 2015ರ ಆಗಸ್ಟ್ 24ರಂದು ಪ್ರಧಾನಿ ಬಳಿಗೆ ಕರೆದೊಯ್ಯಲಾಗಿತ್ತು. ಆದರೆ, ಪ್ರಧಾನಿ ಭೇಟಿಯ ವೇಳೆ ಬಿಜೆಪಿ ಮುಖಂಡರು ವೌನ ಮುರಿಯಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.







