ಲಲಿತಕಲೆಗಳಿಂದ ಮಾನಸಿಕ ವಿಕಾಸ: ಡಾ.ಆಳ್ವ

ಮಂಗಳೂರು, ಮಾ.5: ಭಾರತೀಯ ಲಲಿತ ಕಲೆಗಳಲ್ಲಿ ನಮ್ಮ ಸಂಸ್ಕೃತಿಯ ತಿರುಳು ಅಡಗಿದೆ. ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಇತ್ಯಾದಿಗಳಿಂದ ಕಲಾವಿದರಿಗೆ ಮಾತ್ರವಲ್ಲ ನೋಡುವ ಪ್ರೇಕ್ಷಕರಲ್ಲೂ ಮನೋವಿಕಾಸವುಂಟಾಗುತ್ತದೆ. ಯುವ ಜನಾಂಗ ಸುಲಭದ ಮನರಂಜನೆಗೆ ದಾಸರಾಗುವ ಬದಲು ಸ್ವಯಂಸ್ಪೂರ್ತಿ ಯಿಂದ ನೃತ್ಯ ಸಂಗೀತಾದಿಗಳನ್ನುಕಲಿತು ಪ್ರಬುದ್ಧರಾಗಬೇಕು ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದ್ದಾರೆ. ನಗರದ ಪುರಭವನದಲ್ಲಿ ಯುವ ನೃತ್ಯಗಾರ್ತಿ ಆಶ್ನಿ ಗಿರಿಧರ್ ಪ್ರಸ್ತುತ ಪಡಿಸಿದ ‘ನೃತ್ಯ ಸಿಂಚನ’ ಕಾರ್ಯಕ್ರಮದಲ್ಲಿ ಅತಿಥಿ ಗಳಾಗಿ ಅವರು ಮಾತನಾಡಿದರು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ನೃತ್ಯ ಗುರು ಪಯ್ಯನ್ನೂರು ಭರತ ಕಲಾಂಜಲಿಯ ನಿರ್ದೇಶಕಿ ವಿದುಷಿ ಸೀತಾ ಶಶಿಧರನ್ ಶುಭ ಹಾರೈಸಿದರು. ಆಶ್ನಿಯ ಅಜ್ಜಿ ವೇದಾವತಿ ಟೀಚರ್ ದೀಪ ಬೆಳಗಿಸಿದರು. ಈ ಸಂದರ್ಭ ಸಿತಾರ್ ಗುರು ಸಂಗೀತ ವಿಶಾರದ ಎ.ಎಸ್.ಸಂಜೀವ ಮತ್ತು ಸಂಗೀತ ಶಿಕ್ಷಕಿ ನಿರ್ಮಲಾ ನಾಗರಾಜ್‌ರನ್ನು ಸನ್ಮಾನಿ ಸಲಾಯಿತು. ಚೇಳಾರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಕುಶಾರತಿ ಸ್ವಾಗತಿಸಿದರು. ಗಿರಿಧರ್ ನಾಯಕ್ ಪ್ರಾಸ್ತಾವಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ.ಪ್ರಿಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಡಾ.ಮೋಕ್ಷ ನಾಯಕ್ ವಂದಿಸಿದರು.







