ಪತ್ನಿ ನನ್ನ ಬಲ: ಮಹಿಳಾ ದಿನಾಚರಣೆಗೆ ಮಧ್ಯಪ್ರದೇಶ ಸಿಎಂ ಹೇಳಿಕೆ

ಭೋಪಾಲ್, ಮಾ.6: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸನಿಹದಲ್ಲೇ ತಮ್ಮ 57 ಹುಟ್ಟುಹಬ್ಬದಲ್ಲಿ "ಮೈ ವೈಫ್ ಮೈ ಪವರ್ (ನನ್ನ ಪತ್ನಿ ನನ್ನ ಶಕ್ತಿ) ಎಂಬ ಆಕರ್ಷಕ ಹೇಳಿಕೆ ನೀಡಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ಹತ್ತು ವರ್ಷಗಳ ತಮ್ಮ ಆಡಳಿತದ ಯಶಸ್ಸಿನ ಗೌರವವನ್ನು ಪತ್ನಿ ಸಾಧನಾ ಸಿಂಗ್ ಅವರಿಗೆ ಚವ್ಹಾಣ್ ಬಿಟ್ಟುಕೊಟ್ಟಿದ್ದಾರೆ. ಆಕೆ ನನ್ನ ಶಕ್ತಿಯಷ್ಟೇ ಅಲ್ಲ ಇದೀಗ ಪ್ರಧಾನಿ ನರೇಂದ್ರ ಮೋದಿಯವರಂತೆ ಪ್ರೇರಕ ಶಕ್ತಿ ಕೂಡಾ ಎಂದು ಪತ್ನಿಯ ಗುಣಗಾನ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮೋದಿ ಟ್ವೀಟ್ ಮಾಡುತ್ತಿದ್ದಂತೆ, "ಮೋದಿ ನನಗೆ ಹಾಗೂ ಇಡೀ ನನ್ನ ತಂಡಕ್ಕೆ ಸ್ಫೂರ್ತಿ" ಎಂದು ರಾಗ ಬದಲಿಸಿದರು.
ನನ್ನ ಹುಟ್ಟುಹಬ್ಬ ನನಗೆ ಸೇವಾ ದಿನ. ಹಿಂದುಳಿದ ಮಧ್ಯಪ್ರದೇಶವನ್ನು ಸಂಪೂರ್ಣ ಮುಂದುವರಿದ ರಾಜ್ಯವಾಗಿ ಪರಿವರ್ತಿಸುವುದು ನನ್ನ ಗುರಿ. ಮೋದಿ ತಮ್ಮ ಯಶೋಗಾಥೆಯಲ್ಲಿ ಬಣ್ಣಿಸುವ ಅಭಿವೃದ್ಧಿ ರಾಜಕಾರಣದಿಂದ ನಾನು ಬಹಳಷ್ಟು ಪಾಠ ಕಲಿತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
ಚೌಹಾಣ್ ಅವರ ಅಧಿಕಾರಾವಧಿಯಲ್ಲಿ ಮಧ್ಯಪ್ರದೇಶ ಹೊಸ ಎತ್ತರವನ್ನು ತಲುಪಿದೆ. ಇದೀಗ ಹೊಸ ಗುಣಮಟ್ಟ ಮಧ್ಯಪ್ರದೇಶದಲ್ಲಿ ಕಾಣುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚೌಹಾಣ್, "ಪ್ರಧಾನಿಗಳೇ ಕೃತಜ್ಞತೆಗಳು. ನಿಮ್ಮ ಶುಭಾಶಯ ಇನ್ನೂ ಹೆಚ್ಚಿನ ಸೇವೆ ಮಾಡಲು ನಮಗೆ ಸ್ಫೂರ್ತಿ" ಎಂದು ಟ್ವೀಟ್ ಮಾಡಿದ್ದಾರೆ.







