ಭಾರತ ಸಹಿಷ್ಣು ದೇಶ: ದ್ವೇಷಸಾಧಕರಿಗೆ ಕಡಿವಾಣ ಹಾಕಲು ಮೋದಿಗೆ ಅಮೀರ್ ಖಾನ್ ಮನವಿ

ಮುಂಬೈ, ಮಾ.6: ಭಾರತ ಅತ್ಯಂತ ಸಹಿಷ್ಣು ದೇಶ. ಆದರೆ ಕೆಲವರು ದ್ವೇಷಭಾವನೆಯನ್ನು ಹರಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವಂತೆ ಬಾಲಿವುಡ್ ನಟ ಅಮೀರ್ ಖಾನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
"ಭಾರತ ನನಗೆ ಬ್ರಾಂಡ್ ಅಲ್ಲ; ತಾಯಿ" ಎಂಬ ಭಾವುಕ ಹೇಳಿಕೆ ನೀಡಿದ್ದಾರೆ.
"ನಮ್ಮ ದೇಶ ಅತ್ಯಂತ ಸಹಿಷ್ಣು ದೇಶ. ದ್ವೇಷ ಹಾಗೂ ಕೆಟ್ಟಭಾವನೆಯನ್ನು ಹರಡುವ ಕೆಲ ವ್ಯಕ್ತಿಗಳಿದ್ದಾರೆ. ಈ ದೇಶವನ್ನು ವಿಭಜಿಸುವ ಅರ್ಥದ ಮಾತುಗಳನ್ನಾಡುತ್ತಿರುವ ವ್ಯಕ್ತಿಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಮೋದಿ ಮಾತ್ರ ಅವರನ್ನು ನಿಯಂತ್ರಿಸಲು ಸಾಧ್ಯ. ಮೋದಿಯವರು ನಮ್ಮ ಪ್ರಧಾನಿ. ನಾವು ಅವರನ್ನೇ ಮನವಿ ಮಾಡಿಕೊಳ್ಳಬೇಕು ಎಂದು ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರಿಗೆ ತಿಳಿಸಿದರು.
ಭಾರತದ ನ್ಯಾಯ ವ್ಯವಸ್ಥೆಯಿಂದ ಸುರಕ್ಷತೆಯ ಭಾವನೆ ಬರುತ್ತಿದೆ. ಆದರೆ ನ್ಯಾಯವ್ಯವಸ್ಥೆ ತ್ವರಿತವಾಗಬೇಕು. ಜತೆಗೆ ತಪ್ಪುಗಳು ಆದಾಗ ರಾಜಕೀಯ ನೇತಾರರು ಅದನ್ನು ಖಂಡಿಸಬೇಕು ಎಂದು ಅಮೀರ್‌ಖಾನ್ ಹೇಳಿದ್ದಾರೆ.
"ಕಾನೂನು ಎಲ್ಲರಿಗೂ ಒಂದೇ. ದುರುದೃಷ್ಟವಶಾತ್ ಕೆಲವರು ಋಣಾತ್ಮಕತೆ ಹಾಗೂ ದ್ವೇಷಭಾವನೆ ಹರಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಘೋಷಣೆ, ಸಬ್ಕಾ ಸಾಥ್,, ಸಬ್ಕಾ ವಿಕಾಸ್ ಎಂದು ಖಾನ್ ವಿವರಿಸಿದ್ದಾರೆ.







