ಮಹಿಳಾ ಮೀಸಲಾತಿ ಪರ ರಾಷ್ಟ್ರಪತಿ ಬ್ಯಾಟಿಂಗ್

ನವದೆಹಲಿ, ಮಾ.6: "ಶಾಸನಸಭೆಗಳಲ್ಲಿ ಅವರ ಪ್ರಾತಿನಿಧ್ಯ ಇಲ್ಲದೇ ಮಹಿಳೆಯರ ಸಬಲೀಕರಣ ಹೇಗೆ ಸಾಧ್ಯ?- ಇದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಾರ್ವಜನಿಕ ಸಮಾರಂಭದಲ್ಲಿ ಎತ್ತಿದ ಪ್ರಶ್ನೆ. ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರ ಮೀಸಲಾತಿ ಕಲ್ಪಿಸುವ ಸಂಬಂಧದ ತಿದ್ದುಪಡಿ ಮಸೂದೆಗೆ ಮರುಹುಟ್ಟು ನೀಡಲು ರಾಷ್ಟ್ರಪತಿ ಪ್ರಬಲ ಅಡಿಗಲ್ಲು ಹಾಕಿಕೊಟ್ಟರು.
ಮಹಿಳಾ ಜನಪ್ರತಿನಿಧಿಗಳ ಮೊಟ್ಟಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಇಲ್ಲದಿದ್ದರೆ, ರಾಜಕೀಯ ಪಕ್ಷಗಳು ಮೂರನೇ ಒಂದರಷ್ಟು ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ಅನುಮಾನಗಳಿವೆ ಎಂದು ಮುಖರ್ಜಿ ಹೇಳಿದರು. ಸ್ವಾತಂತ್ರ್ಯ ಬಳಿಕ ಮಹಿಳಾ ಸದಸ್ಯರ ಸಂಖ್ಯೆ ಸಂಸತ್ತಿನಲ್ಲಿ ಶೇಕಡ 12ನ್ನು ಮೀರಿಲ್ಲ. ಇದು ನಮ್ಮ ದುರಂತ ಕಥೆ ಎಂದು ಬಣ್ಣಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಗೆ ನಡೆಸಿದ ಪ್ರಯತ್ನಗಳನ್ನು ನೆನಪಿಸಿಕೊಂಡ ಅವರು, "ಈ ಮಸೂದೆಯನ್ನು ಲೋಕಸಭೆಯಲ್ಲಿ ಮೂರನೇ ಎರಡು ಬಹುಮತದೊಂದಿಗೆ ಆಂಗೀಕರಿಸಿದರೂ, ರಾಜ್ಯಸಭೆ ಅದನ್ನು ಅನುಮೋದಿಸಲಿಲ್ಲ" ಎಂದು ಹೇಳಿದರು.
ಇಡೀ ಸಭೆಯಲ್ಲಿ ಮೋದಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಜರಿದ್ದರು. ಆದರೆ ಅಸ್ವಸ್ಥತೆ ಕಾರಣದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮಾವೇಶಕ್ಕೆ ಹಾಜರಾಗಿರಲಿಲ್ಲ. ಲೋಕಸಭಾ ಸಚಿವಾಲಯ ಇದನ್ನು ಆಯೋಜಿಸಿತ್ತು. ಈ ಮೊಟ್ಟಮೊದಲ ಸಮಾವೇಶಕ್ಕೆ ಸೋನಿಯಾ ಗೈರು ಹಲವು ವದಂತಿಗಳಿಗೆ ಕಾರಣವಾಗಿದೆ.







