ರಾಜಸ್ಥಾನದಲ್ಲಿ ಎರಡು ವರ್ಷದ ಬಾಲಕಿ ಸಹಿತ ನಾಲ್ಕು ಜೋಡಿಯ ಬಾಲ್ಯ ವಿವಾಹ: ಹೆತ್ತವರ ವಿರುದ್ಧ ಕೇಸು ದಾಖಲು

ರಾಜಸ್ಥಾನ, ಮಾ.6: ಬಾಲ್ಯ ವಿವಾಹವನ್ನು ಭಾರತದಲ್ಲಿ ಕಾನೂನಾತ್ಮಕವಾಗಿ ವಿರೋಧಿಸಲಾಗಿದ್ದರೂ ಅದೀಗಲೂ ನಡೆಯುತ್ತಿದೆಯೆಂದು ಸಾಬೀತು ಪಡಿಸುವಂತಹ ಘಟನೆ ವರದಿಯಾಗಿದೆ.
ಎರಡರಿಂದ ಹಿಡಿದು ಹನ್ನೆರಡು ವರ್ಷ ವಯಸ್ಸಿನ ನಾಲ್ಕು ಹೆಮ್ಮಕ್ಕಳ ವಿವಾಹ ನಡೆಸಿದ್ದಕ್ಕಾಗಿ ಮೂವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಅತಿ ರಹಸ್ಯವಾಗಿ ಈ ವಿವಾಹ ನಡೆದಿತ್ತು. ಭಿನ್‌ವಾರ ಜಿಲ್ಲೆಯ ಗಜೂನ ಗ್ರಾಮದಲ್ಲಿ ಕಳೆದ ತಿಂಗಳೂ ವಿವಾಹಗಳು ನಡೆದಿವೆ. ಫೆಬ್ರವರಿ 25ಕ್ಕೆ ವಿವಾಹ ನಡೆಸಲು ನಿರ್ಧರಿಸಲಾಗಿತ್ತಾದರೂ ಪೊಲೀಸರಿಗೆ ಗೊತ್ತಾಗಬಹುದೆಂದು ಆತಂಕದಲ್ಲಿ ಓರ್ವಳು ಬಾಲಕಿಯ ತಂದೆ ಎರಡು ದಿವಸ ಮೊದಲು ವಿವಾಹವನ್ನು ನಡೆಸಲು ನಿರ್ಧರಿಸಿದ್ದರು. ಹೀಗೆ ಫೆಬ್ರವರಿ ಇಪ್ಪತ್ತಮೂರಕ್ಕೆ ನಾಲ್ಕು ವಿವಾಹಗಳೂ ನಡೆದಿವೆ.
ಆದರೆ ವಿವಾಹಕ್ಕೆ ಆಹ್ವಾನಿಸಲಾದ ಗ್ರಾಮೀಣನ ವೇಷಧರಿಸಿ ಪತ್ರಕರ್ತನೊಬ್ಬ ಸಮಾರಂಭದಲ್ಲಿ ಭಾಗವಹಿಸಿ ಫೋಟೊ ತೆಗೆದಿದ್ದ. ಈತ ನೀಡಿದ ಮಾಹಿತಿ ಪ್ರಕಾರ ಮಕ್ಕಳ ಹೆತ್ತವರನ್ನು ಬಂಧಿಸಲಾಗಿದೆ. ವಿವಾಹ ನಡೆದಿದ್ದ ಬಾಲಕಿಯೊಬ್ಬಳ ತಂದೆ ಒಂದು ವರ್ಷದ ಹಿಂದೆ ಮೃತರಾಗಿದ್ದರು. ಈ ಕುಟುಂಬದಿಂದ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಹೆಮ್ಮಕ್ಕಳಿಗೆ ಅದೇ ಪ್ರಾಯದ ಗಂಡು ಮಕ್ಕಳೊಂದಿಗೆ ಮದುವೆ ಮಾಡಿಸಲಾಗಿದೆ. ಆದರೆ ಬಾಲ್ಯ ವಿವಾಹ ವಿರೋಧಿ ಕಾನೂನು ಪ್ರಕಾರ ಈ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅದನ್ನು ವಿರೋಧಿಸುವವರು ಹೇಳಿದ್ದಾರೆ.
ಮದುವೆ ಮಾಡಿಕೊಟ್ಟರೂ ಈ ಬಾಲಕಿಯರು ಹರೆಯ ನೆರೆಯುವವರೆಗೆ ತಮ್ಮ ತಾಯಿಮನೆಯಲ್ಲಿಯೇ ಇರುತ್ತಾರೆ. ಮಕ್ಕಳ ವಿವಾಹವನ್ನು ರದ್ದು ಪಡಿಸುವುದಾಗಿ ಬಾಲ್ಯವಿವಾಹ ವಿರುದ್ಧ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ಕೃತಿ ಭಾರತಿ ಹೇಳಿದ್ದಾರೆ.
ಹೆತ್ತವರ ವಿರುದ್ಧ ಕೇಸು ದಾಖಲಿಸುವುದರೊಂದಿಗೆ ಪೊಲೀಸರ ಜವಾಬ್ದಾರಿ ಮುಗಿಯಿತು. ಆದರೆ ಈ ಮಕ್ಕಳನ್ನು ಸಾಮಾನ್ಯ ಜೀವನಕ್ಕೆ ಮರಳಿ ತರುವ ಜವಾಬ್ದಾರಿ ತಮಗಿದೆಯೆಂದು ಬಾಲ್ಯವಿವಾಹದ ವಿರುದ್ಧ ಹೋರಾಡುತ್ತಿರುವ ಕೃತಿ ಭಾರತಿ ಹೇಳಿದ್ದಾರೆ







