ಉ.ಪ್ರ.ವಿಧಾನ ಪರಿಷತ್‌ನ 23 ಸ್ಥಾನಗಳನ್ನು ಗೆದ್ದ ಎಸ್‌ಪಿ, ಶೂನ್ಯಸಾಧನೆ ಮಾಡಿದ ಬಿಜೆಪಿಗೆ ಭಾರೀ ಮುಖಭಂಗ

ಲಕ್ನೋ,ಮಾ.6: ರಾಜ್ಯ ವಿಧಾನ ಪರಿಷತ್‌ನ 28 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದಿದ್ದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 23 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನ ಈ ಗೆಲುವು ಎಸ್‌ಪಿಗೆ ಸಿಂಹಬಲವನ್ನು ನೀಡಿದ್ದರೆ,ರಾಜ್ಯದಲ್ಲಿ ಅಧಿಕಾರಕ್ಕಾಗಿ ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಶೂನ್ಯ ಸಾಧನೆಯೊಂದಿಗೆ ಭಾರೀ ಮುಖಭಂಗವನ್ನು ಅನುಭವಿಸಿದೆ.
ಇನ್ನುಳಿದ ಐದು ಸ್ಥಾನಗಳ ಪೈಕಿ ಬಿಎಸ್‌ಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದರೆ,ಎರಡು ಸ್ಥಾನಗಳು ಪಕ್ಷೇತರರ ಪಾಲಾಗಿವೆ.
ಈ ಗೆಲುವಿನೊಂದಿಗೆ 100 ಸದಸ್ಯಬಲದ ವಿಧಾನ ಪರಿಷತ್‌ನಲ್ಲಿ ಎಸ್‌ಪಿ ಬಹುಮತವನ್ನು ಗಳಿಸಿದೆ. ಪಕ್ಷವು ಈ ಹಿಂದೆ ಸದಸ್ಯರ ಕೊರತೆಯಿಂದಾಗಿ ಮೇಲ್ಮನೆಯಲ್ಲಿ ತನ್ನ ಮಸೂದೆಗಳ ಅಂಗೀಕಾರಕ್ಕೆ ಸಮಸ್ಯೆಯನ್ನೆದುರಿಸುತ್ತಿತ್ತು.
ಚುನಾವಣಾ ಆಯೋಗವು 35 ಸ್ಥಾನಗಳಿಗೆ ಚುನಾವಣೆಗಾಗಿ ಫೆ.8ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಏಳು ಎಸ್‌ಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ಉಳಿದ 28 ಸ್ಥಾನಗಳಿಗೆ ಮಾ.3ರಂದು ಮತದಾನ ನಡೆದಿತ್ತು.
ಇಂದಿನ ಫಲಿತಾಂಶದೊಂದಿಗೆ ಮೇಲ್ಮನೆಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ:ಎಸ್‌ಪಿ-58,ಬಿಎಸ್‌ಪಿ-16,ಕಾಂಗ್ರೆಸ್-2,ಬಿಜೆಪಿ-7,ಟೀಚರ್ಸ್ ಗ್ರೂಪ್-5,ಪಕ್ಷೇತರರು-6 ಮತ್ತು ಆರ್‌ಎಲ್‌ಡಿ-1. ಐದು ಸ್ಥಾನಗಳು ಖಾಲಿಯಿವೆ.
ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಫಲಿತಾಂಶಗಳು ಸೂಚಿಸಿವೆ. ರಾಜ್ಯದ ಜನರು ನಮ್ಮಾಂದಿಗಿದ್ದಾರೆ ಮತ್ತು 2017ರ ವಿಧಾನಸಭಾ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಎಸ್‌ಪಿ ರಾಷ್ಟ್ರೀಯ ವಕ್ತಾರ ರಾಮಗೋಪಾಲ ಯಾದವ ಹೇಳಿದರು.







