ಭಯೋತ್ಪಾದಕ ದಾಳಿಯ ಮಾಹಿತಿಯ ಹಿನ್ನೆಲೆಯಲ್ಲಿ ಗುಜರಾತ್ನಾದ್ಯಂತ ಕಟ್ಟೆಚ್ಚರ,ಎನ್ಎಸ್ಜಿ ನಿಯೋಜನೆ

ಸೋಮನಾಥ್ ದೇವಸ್ಥಾನ
ಅಹ್ಮದಾಬಾದ್,ಮಾ.6: ಗುಜರಾತ್ಗೆ ಭಯೋತ್ಪಾದಕರು ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.ಸೋಮವಾರ ಮಹಾ ಶಿವರಾತ್ರಿ ಆಚರಿಸಲಾಗುತ್ತಿದ್ದು,ಇತಿಹಾಸ ಪ್ರಸಿದ್ಧ ಸೋಮನಾಥ ದೇವಸ್ಥಾನ ಸೇರಿದಂತೆ ಪ್ರಮುಖ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯಕ್ಕೆ ನಾಲ್ಕು ಎನ್ಎಸ್ಜಿ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು,ಈ ಪೈಕಿ ಒಂದನ್ನು ಗಿರ್-ಸೋಮನಾಥ ಜಿಲ್ಲೆಯಲ್ಲಿನ ಸೋಮನಾಥ ದೇವಸ್ಥಾನದ ಭದ್ರತೆಗೆ ನಿಯೋಜಿಸಲಾಗಿದೆ.
ರವಿವಾರ ಗಾಂಧಿನಗರದಲ್ಲಿ ಎನ್ಸ್ಜಿ ಅಧಿಕಾರಿಗಳೊಂದಿಗೆ ಮಾತುಕತೆಯ ಬಳಿಕ ಗುಜರಾತ್ ಡಿಜಿಪಿ ಪಿ.ಸಿ.ಠಾಕೂರ್ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಮೂರು ಪ್ರಮುಖ ಯಾತ್ರಾಸ್ಥಳಗಳಿದ್ದು, ಸೋಮವಾರ ಮಹಾ ಶಿವರಾತ್ರಿ ಸಂದರ್ಭದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸೋಮನಾಥ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿದ್ದು, ದ್ವಾರಕಾದ ನಾಗೇಶ್ವರ ಜ್ಯೋತಿರ್ಲಿಂಗ ಮತ್ತು ಜುನಾಗಡದ ಭಾವನಾಥ ಇನ್ನೆರಡು ಪ್ರಮುಖ ಯಾತ್ರಾಸ್ಥಳಗಳಾಗಿವೆ ಎಂದು ತಿಳಿಸಿದ ಅವರು, ಸಂಭಾವ್ಯ ಭಯೋತ್ಪಾದಕ ದಾಳಿಗಳ ಬಗ್ಗೆ ಲಭಿಸಿರುವ ಗುಪ್ತಚರ ಮಾಹಿತಿಗಳು ನಂಬಲರ್ಹವಾಗಿದ್ದು, ಇವುಗಳನ್ನು ದೃಢಪಡಿಸಿಕೊಳ್ಳಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸ್ಥಳೀಯ ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಜನತೆಯ ರಕ್ಷಣೆಗಾಗಿ ಮತ್ತು ಭಯೋತ್ಪಾದಕರ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಪೊಲೀಸರು ಕಂಕಣಬದ್ಧರಾಗಿದ್ದಾರೆ ಎಂದು ಥಾಕೂರ್ ಹೇಳಿದರು.





