‘ಸರಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದಲ್ಲಿ 5,109 ನವಜಾತ ಶಿಶುಗಳ ಮೃತ್ಯು’

-ಅಮ್ಜದ್‌ಖಾನ್ ಎಂ.
ಬೆಂಗಳೂರು, ಮಾ.6: ರಾಜ್ಯದಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವರ್ಷದಲ್ಲಿ 518 ಬಾಣಂತಿಯರು ಹಾಗೂ 5,109 ನವಜಾತ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಾಣಂತಿಯರ ಸಾವಿಗೆ ಪ್ರಸವದ ನಂತರದ ತೀವ್ರರಕ್ತ ಸ್ರಾವ, ಬಾಣಂತಿ ನಂಜು, ಗಂಡಾಂತರ ಗರ್ಭಾವಸ್ಥೆ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮೂರ್ಛೆ, ಅಸುರಕ್ಷಿತ ಗರ್ಭಪಾತ, ಅಡಚಣೆಗೊಂಡ ಪ್ರಸವದ ಕಾರಣಗಳಿಂದಾಗಿ ಬಾಣಂತಿಯರು ಸಾವನ್ನಪ್ಪಿದರೆ, ಅವಧಿಗೆ ಮುನ್ನ ಜನನ, ಕಡಿಮೆ ತೂಕವನ್ನು ಹೊಂದಿರುವುದು, ಶ್ವಾಸಕೋಶದ ಸೋಂಕು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ನವಜಾತ ಶಿಶುಗಳ ಮೃತಪಟ್ಟಿವೆ.
ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳ ಸಾವು ಸಂಭವಿಸುತ್ತಿರುವುದನ್ನು ಪತ್ತೆ ಹಚ್ಚಲು ರಾಜ್ಯ ಸರಕಾರವು ಪ್ರತೀ ಜಿಲ್ಲೆಯಲ್ಲಿ ಎಫ್‌ಬಿಎಂಡಿಆರ್ ಸಮಿತಿ ಮತ್ತು ಸಮುದಾಯದಲ್ಲಿ ಸಂಭವಿಸುವ ತಾಯಿ ಮರಣಗಳಿಗೆ ತಾಲೂಕು ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಇದಲ್ಲದೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಯೂ ಸಮಿತಿಗಳನ್ನು ರಚಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ 521 ಮಂದಿ ಅತಿಹೆಚ್ಚು ನವಜಾತ ಶಿಶುಗಳು ಮೃತಪಟ್ಟಿದ್ದು, 23 ಮಂದಿ ಬಾಣಂತಿ ತಾಯಂದಿರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಒರ್ವ ಬಾಣಂತಿ ತಾಯಿ ಅಸುನೀಗಿದ್ದಾರೆ.
ತಾಯಿ ಹಾಗೂ ನವಜಾತ ಶಿಶುಗಳ ಮರಣದ ಜಿಲ್ಲಾವಾರು ಮಾಹಿತಿ: ಬೆಂಗಳೂರು ನಗರ: ತಾಯಿ(1), ನವಜಾತ ಶಿಶು(21), ಬೆಂಗಳೂರು ಗ್ರಾಮಾಂತರ: ತಾಯಿ(7), ನವಜಾತ ಶಿಶು(46), ರಾಮನಗರ: ತಾಯಿ(4), ನವಜಾತ ಶಿಶು(23), ಚಿತ್ರದುರ್ಗ: ತಾಯಿ(29), ನವಜಾತ ಶಿಶು(243), ದಾವಣಗೆರೆ: ತಾಯಿ(18), ನವಜಾತ ಶಿಶು(134), ಕೋಲಾರ: ತಾಯಿ(11), ನವಜಾತ ಶಿಶು(97).
ಚಿಕ್ಕಬಳ್ಳಾಪುರ: ತಾಯಿ(27), ನವಜಾತ ಶಿಶು(103), ಶಿವಮೊಗ್ಗ: ತಾಯಿ(10), ನವಜಾತ ಶಿಶು(225), ತುಮಕೂರು: ತಾಯಿ(2), ನವಜಾತ ಶಿಶು(201), ಬಾಗಲಕೋಟೆ: ತಾಯಿ(17), ನವಜಾತ ಶಿಶು(68), ಬೆಳಗಾವಿ: ತಾಯಿ(79), ನವಜಾತ ಶಿಶು(360).
ವಿಜಯಪುರ: ತಾಯಿ(29), ನವಜಾತ ಶಿಶು(344), ಧಾರವಾಡ: ತಾಯಿ(16), ನವಜಾತ ಶಿಶು(71), ಗದಗ: ತಾಯಿ(10), ನವಜಾತ ಶಿಶು(113), ಹಾವೇರಿ: ತಾಯಿ(15), ನವಜಾತ ಶಿಶು(209), ಉತ್ತರ ಕನ್ನಡ: ತಾಯಿ(2), ನವಜಾತ ಶಿಶು(92), ಬಳ್ಳಾರಿ: ತಾಯಿ(48), ನವಜಾತ ಶಿಶು(478), ಬೀದರ್: ತಾಯಿ(21), ನವಜಾತ ಶಿಶು(23).
ಕಲಬುರಗಿ: ತಾಯಿ(41), ನವಜಾತ ಶಿಶು(499), ಯಾದಗಿರಿ: ತಾಯಿ(23), ನವಜಾತ ಶಿಶು(229), ಕೊಪ್ಪಳ: ತಾಯಿ(15), ನವಜಾತ ಶಿಶು(229), ರಾಯಚೂರು: ತಾಯಿ(23), ನವಜಾತ ಶಿಶು(521), ಚಾಮರಾಜನಗರ: ತಾಯಿ(0), ನವಜಾತ ಶಿಶು(27).
ಚಿಕ್ಕಮಗಳೂರು: ತಾಯಿ(1), ನವಜಾತ ಶಿಶು(4), ದಕ್ಷಿಣ ಕನ್ನಡ: ತಾಯಿ(19), ನವಜಾತ ಶಿಶು(84), ಹಾಸನ: ತಾಯಿ(9), ನವಜಾತ ಶಿಶು(199), ಕೊಡಗು: ತಾಯಿ(6), ನವಜಾತ ಶಿಶು(34), ಮಂಡ್ಯ: ತಾಯಿ(8), ನವಜಾತ ಶಿಶು(75), ಮೈಸೂರು: ತಾಯಿ(23), ನವಜಾತ ಶಿಶು(246), ಉಡುಪಿ: ತಾಯಿ(4), ನವಜಾತ ಶಿಶು(47)ಗಳು ಸೇರಿದಂತೆ ಒಟ್ಟು 518 ಬಾಣಂತಿಯರು ಹಾಗೂ 5,109 ನವಜಾತ ಶಿಶುಗಳು ಮೃತಪಟ್ಟಿವೆ.
ಬಾಣಂತಿಯರ ಸಾವು ಸಂಭವಿಸದಂತೆ ಭಾರತ ಸರಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ಮೂಲಕ ಪ್ರಸೂತಿ ಆರೈಕೆ, ತಾಯಿ ಭಾಗ್ಯ, ತಾಯಿ ಭಾಗ್ಯ ಪ್ಲಸ್, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ಮಡಿಲು ಯೋಜನೆ, ವಾತ್ಸಲ್ಯವಾಣಿ, ಇಎಂಒಸಿ ತರಬೇತಿ, ರಕ್ತನಿಧಿ, ರಕ್ತ ಸಂಗ್ರಹಣಾ ಘಟಕಗಳು ಮತ್ತು ರಕ್ತ ವಾಹಿನಿ, ಜನನಿ ಸುರಕ್ಷಾ ವಾಹಿನಿ ಹಾಗೂ ನಗು ಮಗು ವಾಹನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.
ಇದಲ್ಲದೆ, 2016-17ನೆ ಸಾಲಿನಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಗರ್ಭಿಣಿ ಸ್ತೀಯರಿಗೆ ಉತ್ತಮವಾದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸುವುದು, ಎಂಸಿಟಿಎಸ್ ತಂತ್ರಾಂಶದ ಬಲಪಡಿಸುವುದು ಸೇರಿದಂತೆ ಇನ್ನಿತರ ಪ್ರಸ್ತಾವನೆಗಳನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದೆ.
‘ಜನನಿ ಶಿಶು ಸುರಕ್ಷಾ ಯೋಜನೆ, ಸಮಗ್ರ ನವಜಾತ ಶಿಶು ಮತ್ತು ಮಕ್ಕಳ ಕಾಯಿಲೆ ನಿರ್ವಹಣೆ ಕಾರ್ಯಕ್ರಮ, ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಕಾರ್ಯಕ್ರಮ, ನವಜಾತ ಶಿಶುಗಳ ಸ್ಥಿರೀಕರಣ ಘಟಕ, ನವಜಾತ ಶಿಶುಗಳ ಆರೈಕೆ ಸ್ಥಳ, ಮಕ್ಕಳ ತೀವ್ರ ನಿಗಾ ಘಟಕ ಹಾಗೂ ಮನೆಮಟ್ಟದಲ್ಲಿ ನವಜಾತ ಶಿಶು ಆರೈಕೆ ಯೋಜನೆಗಳಿಂದಾಗಿ ರಾಜ್ಯದಲ್ಲಿ ಶಿಶು ಮರಣ ಪ್ರಮಾಣವು ಕಡಿಮೆಯಾಗಿದೆ. 2008-09ರಲ್ಲಿ 41ರಷ್ಟಿದ್ದ ಶಿಶು ಮರಣ ಪ್ರಮಾಣವು 2013ರಲ್ಲಿ 31ಕ್ಕೆ ತಲುಪಿದ್ದು, ಪ್ರಸ್ತುತ 28ಕ್ಕೆ ಇಳಿಕೆಯಾಗಿದೆ’.
-ಯು.ಟಿ.ಖಾದರ್, ಆರೋಗ್ಯ ಸಚಿವ







