ಉತ್ತರ ಕನ್ನಡ ಕೊಂಕಣಿ ಭಾಷಿಕರ ಜಿಲ್ಲೆ: ರಾಯ್ ಕ್ಯಾಸ್ಟಲಿನೋ
.jpg)
ಭಟ್ಕಳ, ಮಾ. 6: ಶ್ರೀ ನಾಗ ಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ಯುವ ಪುರಸ್ಕಾರ ಪ್ರದಾನ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕೊಂಕಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಅಕಾಡಮಿ ಅಧ್ಯಕ್ಷ ರಾಯ್ ಕಾಸ್ತೆಲಿನೋ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಭಾಷಿಕರೇ ಅಧಿಕವಾಗಿದ್ದು, ಹೆಚ್ಚು ಜನರು ಕೊಂಕಣಿಯಲ್ಲಿ ವ್ಯವಹರಿಸುತ್ತಿದ್ದಾರೆ ಎಂದರು.
ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತರ ಕನ್ನಡದವರಿಗೇ 8 ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಕ್ಕೆ ತುಂಬಾ ಹರ್ಷಿತನಾಗಿದ್ದೇನೆ ಎಂದರು.
ಕೊಂಕಣಿ ಕಲಿಯುವವರಿಗೆ ಕೊಂಕಣಿ ಲಿಪಿಯ ಕುರಿತು ಗೊಂದಲವಿದೆ. ಆದರೆ ಕೊಂಕಣಿಗೆ ಐದು ಲಿಪಿಗಳಿದ್ದು, ಕೊಂಕಣಿಯನ್ನು ಕನ್ನಡದಲ್ಲಿಯೂ ಕಲಿಯಬಹುದು. ದೇವನಾಗರಿ ಲಿಪಿಯಲ್ಲಿಯೂ ಕಲಿಯಬಹುದು. ಭಟ್ಕಳವು ಕೊಂಕಣಿಗರ ನಾಡಾಗಿದೆ. ಇಲ್ಲಿನ ನವಾಯತ ಮುಸ್ಲಿಮ್, ಕ್ರಿಶ್ಚಿಯನ್, ದಾಲ್ಜಿಗಳು, ಮರಾಠಿಗಳು, ಕೊಂಕಣಿಗರು ಸೇರಿದಂತೆ ಹಲವರು ಕೊಂಕಣಿ ಭಾಷೆಯನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಲ್ಲಿ ಕೊಂಕಣಿ ಸಾಹಿತ್ಯಅಕಾಡಮಿಯ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ವಿಕ್ಟರ್ ಎಫ್.ಗೋಮ್ಸ್ ಮಾತನಾಡಿ, ಕರ್ನಾಟದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿಯು ಉತ್ತಮ ಕೆಲಸ ಮಾಡುತ್ತಿದೆ. ಕಳೆದ ಎರಡು ವರ್ಷಗಳ ಸಾಧನೆಯನ್ನು ನೋಡಿದರೆ ಅಕಾಡಮಿಯ ಕಿರುಪರಿಚಯವಾದಂತಾಗುವುದು. ಭಟ್ಕಳದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಧ್ಯಕ್ಷರು ಕರಾವಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಿದಂತಾಗಿದೆ ಎಂದರು. ಮುಂದಿನ ದಿನಗಳಲ್ಲಿ ಅಕಾಡಮಿಯು ಇನ್ನೂ ಹೆಚ್ಚಿನ ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿದರು.
ವೇದಿಕೆಯಲ್ಲಿ ತಾಪಂ ಮಾಜಿ ಅಧ್ಯಕ್ಷೆ ಶಾಂತಿ ಜಗದೀಶ ಸುಕ್ರನಮನೆ, ಜಿ.ಎಸ್.ಬಿ. ಹತ್ತು ಸಮಸ್ತರ ಅಧ್ಯಕ್ಷ ಹರಿಶ್ಚಂದ್ರ ಕಾಮತ್, ಮುಂಡಳ್ಳಿಯ ಕೆಥೋಲಿಕ್ ಸಭಾದ ಅಧ್ಯಕ್ಷ ಜಾನ್ ಫ್ರಾನ್ಸಿಸ್‌ಗೋಮ್ಸ್, ಅಕಾಡಮಿಯ ರಿಜಿಸ್ಟ್ರಾರ ಡಾ. ದೇವಿ ದಾಸ ಪೈ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಉಪಾಧ್ಯಕ್ಷ ತಿಮ್ಮಪ್ಪಖಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿರಸಿಯ ಕೊಂಕಣ ಕಲಾ ಮಂಡಲದ ವಾಸುದೇವ ಶಾನಭಾಗರವರು ರಚಿಸಿದ 25 ಗೀತೆಗಳುಳ್ಳ ಕೊಂಕಣಿ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಸಂತೋಷ ಡಿಸಿಲ್ವ ಪ್ರಾರ್ಥನೆ ಹಾಡಿದರು. ಪ್ರಸನ್ನ ಪ್ರಭು ನಿರೂಪಿಸಿ, ಅಕಾಡಮಿಯ ರಿಜಿಸ್ಟ್ರಾರ್ ದೇವಿದಾಸ ಪೈ ವಂದಿಸಿದರು. ಕಾರ್ಯಕ್ರಮಕ್ಕೆ ಅಕಾಡಮಿಯ ಸದಸ್ಯರಾದ ಮಮತಾ ಕಾಮತ್ ಮೈಸೂರು, ಶಿವಾನಂದ ಶೇಟ್, ಆಶೋಕ ಕಾಸರಗೋಡು, ಕಮಲಾಕ್ಷ ಶೇಟ್‌ಉಡುಪಿ, ಲುಯಿಸ್‌ಕುಟಿನೋ ಬೆಂಗಳೂರು, ಡಾ.ವಾರಿಜಾ ನೀರಬೈಲ್, ಶೇಖರಗೌಡ ಮುಂತಾದವರು ಸಹಕರಿಸಿದರು.
ಕೊಂಕಣಿ ಸಾಹಿತ್ಯ ಕಾರ್ಯಕ್ರಮದ ಮೇಲೆ ಬಂದ್ ಪ್ರಭಾವ
ಇಸ್ಲಾಮ್ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಸಂಸದ ಅನಂತ್‌ಕುಮಾರ್ ಹೆಗಡೆಯನ್ನು ಬಂಧಿಸುವಂತೆ ಆಗ್ರಹಿಸಿ ಇಲ್ಲಿನ ಮುಸ್ಲಿಮ್ ಸಂಘಟನೆಗಳು ಭಟ್ಕಳ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಕೊಂಕಣಿ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಾಹಿತ್ಯಕಾರ್ಯಕ್ರಮದ ಮೇಲೆ ತೀವ್ರ ಪ್ರಭಾವ ಬೀರಿತ್ತು.
ಕಾರ್ಯಕ್ರಮದಲ್ಲಿ ಜನರೇ ಇಲ್ಲದೆ ಸಭಾಂಗಣದ ಆಸನಗಳು ಖಾಲಿ ಖಾಲಿಯಾಗಿದ್ದು, ಕಂಡು ಬಂತು.
ಸನ್ಮಾನಿತರು
ಗೌರವ ಪ್ರಶಸ್ತಿ ವಿಭಾಗ: ಸಾಹಿತ್ಯದಲ್ಲಿ ರಾಮಚಂದ್ರ ಎಂ. ಶೇಟ್, ಕಲೆಯಲ್ಲಿ ಕಾಸರಗೋಡು ಚಿನ್ನಾ, ಜಾನಪದದಲ್ಲಿ ಆಲೂ ಪೀಲೂ ಮರಾಠಿ.
ಪುಸ್ತಕ ಬಹುಮಾನ: ಭಾಷಾಂತರದಲ್ಲಿ ಒಂ ಗಣೇಶ ಉಪ್ಪುಂದ, ರೊನಿ ಅರುಣ್, ಲೇಖನದಲ್ಲಿ ಪಾ. ಡೆನಿಸ್ ಕ್ಯಾಸ್ಟಲಿನೊ.
ಯುವ ಪುರಸ್ಕಾರ: ನೃತ್ಯ ಅಂಜಲಿ ವಿಲ್ಸನ್ ವಾಜ್, ಕ್ರೀಡೆಯಲ್ಲಿ ನಸ್ರುಲ್ಲಾ ಆಸ್ಕೇರಿ, ಸಂಗೀತದಲ್ಲಿ ರಾಜರಾಮ ಪ್ರಭು. ಸಾಧಕರಿಗೆ ಸನ್ಮಾನ ವಿಭಾಗ: ಎಸ್.ಎಂ.ಸೈಯದ್ ಖಲೀಲುರ್ರಹ್ಮಾನ್ ಅನಿವಾಸಿ ಭಾರತೀಯ, ಪ್ರದೀಪ್ ಜಿ.ಪೈ, ಜಾರ್ಜ್ ಫೆರ್ನಾಂಡಿಸ್.







