ಸತ್ಯಮೇವ ಜಯತೆ.
ಕೊನೆಗೂ ಸತ್ಯ ಗೆದ್ದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಾಗ ಟ್ವೀಟ್ ಮಾಡಿ ಹೇಳುತ್ತಿದ್ದ ‘ಸತ್ಯಮೇವ ಜಯತೆ’ ಮಾತು ನಿಜವಾಗಿದೆ. ಆದರೆ ಅದು ಮೋದಿ ಪಾಲಿಗಲ್ಲ. ಅದು ಜೆಎನ್‌ಯು ಪ್ರಕರಣದಲ್ಲಿ. ಪೂರ್ವಯೋಜಿತವಾಗಿ ಜೆಎನ್‌ಯುನ ಪ್ರಗತಿಪರ ಚಿಂತನೆಯುಳ್ಳ ವಿದ್ಯಾರ್ಥಿಗಳನ್ನು ‘ದೇಶದ್ರೋಹ’ದ ಆರೋಪದಲ್ಲಿ ಜೈಲಿಗಟ್ಟುವ ಕುತಂತ್ರ ವಿಫಲವಾಗಿದೆ. ಈ ಮೂಲಕ ಕೇಂದ್ರ ಸರಕಾರದ ಹಾಗೂ ಸ್ಮತಿ ಇರಾನಿಯ ಆಪ್ತೆಯ ಸಂಚು ಕೂಡಾ ಬಟಾಬಯಲಾಗಿದ್ದು ಪ್ರಧಾನಿ ಮೋದಿಗೆ ಇರಿಸುಮುರಿಸುವನ್ನುಂಟು ಮಾಡಿದೆ.
ತನ್ನ ಬಲಪಂಥೀಯ ಚಟುವಟಿಕೆಗಳನ್ನು ಇಡೀ ದೇಶದ ವಿವಿಗಳಲ್ಲಿ ವಿಸ್ತರಿಸಲು ಎಬಿವಿಪಿಯಂತಹ ಸಂಘಟನೆಗಳು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ದೇಶದ್ರೋಹದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಾದಿಸಿದ್ದವರಿಗೆ ದಾಖಲೆಗಳನ್ನು ನೀಡಲು ಸಾಧ್ಯವಾಗಿಲ್ಲ. ಕೊನೆಗೂ ಸತ್ಯ ಗೆದ್ದಿದೆ. ಪರಿಣಾಮ ಜೆಎನ್‌ಯು ಮುಖಂಡ ಕನ್ಹಯ್ಯಾ ಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಾಡಿದ ಭಾಷಣ ಕ್ರಾಂತಿ ಕಹಳೆಯನ್ನು ಊದಿದೆ. ಇದು ನರೇಂದ್ರ ಮೋದಿಗೆ ಮರ್ಮಾಘಾತ ನೀಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಜನವಿರೋಧಿ ಸರಕಾರದ ವಿರುದ್ಧ ಕನ್ಹಯ್ಯಾರಂತಹ ಯುವಕರು ದಂಗೆದ್ದು ನಿಲ್ಲುತ್ತಾರೆ ಎನ್ನುವುದಕ್ಕೆ ಜೆಎನ್‌ಯು ಘಟನೆ ಸಾಕ್ಷಿ. ಜನವಿರೋಧಿ, ಭ್ರಷ್ಟಾಚಾರ, ಕೋಮುವಾದಿ ವಿರುದ್ಧ ಯುವಜನಾಂಗ ಪ್ರತಿ ವಿವಿಯಲ್ಲೂ ಇಂತಹ ಉಗ್ರ ಹೋರಾಟ ಮಾಡಬೇಕು. ಹೀಗಾದಲ್ಲಿ ಮಾತ್ರ ನಮ್ಮ ‘ಪ್ರಜಾಪ್ರಭುತ್ವ’ ಉಳಿಯಬಹುದು.





