ಪ್ರಾಧಿಕಾರ ಸ್ಥಾಪನೆಯ ಬಳಿಕ ಸಿರಿಯ ಅಧ್ಯಕ್ಷರು ಕೆಳಗಿಳಿಯಬೇಕು: ಸೌದಿ ಅರೇಬಿಯ
ಪ್ಯಾರಿಸ್, ಮಾ. 6: ಸಿರಿಯದಲ್ಲಿ ಮಧ್ಯಾಂತರ ಪ್ರಾಧಿಕಾರವೊಂದನ್ನು ಸ್ಥಾಪಿಸಿದ ತಕ್ಷಣ ಆ ದೇಶದ ಅಧ್ಯಕ್ಷ ಬಶರ್ ಅಲ್-ಅಸಾದ್ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸೌದಿ ಅರೇಬಿಯದ ವಿದೇಶ ಸಚಿವ ಆದಿಲ್ ಅಲ್ ಜುಬೇರ್ ಶನಿವಾರ ಹೇಳಿದ್ದಾರೆ.
ದೇಶದಲ್ಲಿ ಐದು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆ ಈ ವಾರ ಜಿನೇವಾದಲ್ಲಿ ಪುನಾರಂಭಗೊಳ್ಳಲಿದ್ದು, ಸಿರಿಯ ಸರಕಾರ ಮತ್ತು ಪ್ರತಿಪಕ್ಷ ಮುಖಾಮುಖಿಯಾಗಲಿವೆ. ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಅಂತಾರಾಷ್ಟ್ರೀಯ ಮಾರ್ಗನಕ್ಷೆಯು ಈ ವರ್ಷದ ಮಧ್ಯದ ವೇಳೆಗೆ ರಾಜಕೀಯ ಮಧ್ಯಾಂತರ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವುದನ್ನು ಹಾಗೂ 2017ರ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಚುನಾವಣೆಯ ನಡೆಯುವುದನ್ನು ಎದುರು ನೋಡುತ್ತಿದೆ.
‘‘ಈ ಪ್ರಕ್ರಿಯೆ ಆರಂಭಗೊಳ್ಳುವಾಗ ಅಸಾದ್ ಅಧಿಕಾರದಿಂದ ಕೆಳಗಿಳಿಯಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೌದಿ ವಿದೇಶ ಸಚಿವರು ಹೇಳಿದರು. ಸೌದಿ ಅರೇಬಿಯ ಸರಕಾರವು ಸಿರಿಯದ ಪ್ರತಿಪಕ್ಷಕ್ಕೆ ಬೆಂಬಲ ನೀಡುತ್ತಿದೆ.
‘‘ಮಧ್ಯಾಂತರ ಅಧಿಕಾರ ಹಸ್ತಾಂತರ ಪ್ರಾಧಿಕಾರವೊಂದು ಜಾರಿಗೆ ಬರುತ್ತದೆ. ಆಗ ಅಧಿಕಾರವು ಅಸಾದ್‌ರಿಂದ ಪ್ರಾಧಿಕಾರಕ್ಕೆ ವರ್ಗಾವಣೆಯಾಗುತ್ತದೆ. ಬಳಿಕ ಅಸಾದ್ ಹೋಗುತ್ತಾರೆ’’ ಎಂದರು.





