ಬಂಟ್ವಾಳ ಪುರಸಭೆ ಗದ್ದುಗೆ ಏರಲು ಕಾಂಗ್ರೆಸ್ ಸದಸ್ಯರಿಂದ ಪೈಪೋಟಿ
ಬಂಟ್ವಾಳ, ಫೆ.6: ಪುರಸಭಾ ಅಧ್ಯಕ್ಷೆ, ಉಪಾಧ್ಯಕ್ಷೆಯ ಅಧಿಕಾರಾವಧಿ ಮಾ.12ಕ್ಕೆ ಕೊನೆಗೊಳ್ಳಲಿದ್ದು, ಎರಡನೆ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವುದರಿಂದ ಆಯ್ಕೆ ಪ್ರಕ್ರಿಯೆಯು ಪಕ್ಷದ ಮುಖಂಡರನ್ನು ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರನ್ನು ಇಕ್ಕಟ್ಟಿಕೆ ಸಿಲುಕಿಸಿದೆ. ಪ್ರಮುಖ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಮುಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ ಮುಂಚೂಣಿಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಗದೀಶ್ ಕುಂದರ್, ಗಂಗಾಧರ. ಪ್ರವೀಣ್ ಬಿ. ಸದ್ದಿಲ್ಲದೆ ತೆರೆಯ ಮರೆಯಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಅರ್ಹ ಮಹಿಳಾ ಆಕಾಂಕ್ಷಿಗಳು ಅವಕಾಶ ಸಿಕ್ಕಿದರೆ ಗದ್ದುಗೆ ಏರಲು ತಯಾರಿ ನಡೆಸಿದ್ದಾರೆ. ಕಳೆದ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಗಳು ಮಹಿ ಳೆಯರಿಗೆ ದೊರೆತ ಕಾರಣ ಈ ಅವಧಿಯಲ್ಲಿ ಬಹುತೇಕ ಪುರುಷರಿಗೆ ಅವಕಾಶ ಲಭ್ಯವಾಗಬಹುದು ಅಥವಾ ಒಂದು ಸ್ಥಾನ ಮಹಿಳೆಗೂ ದೊರೆಯುವ ಸಂಭವವಿದೆ. ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಅರ್ಹ ಮತ್ತು ಸೂಕ್ತ ಸದಸ್ಯರನ್ನು ಆಯ್ಕೆ ಮಾಡುವುದಾಗಿ ಅಭಿಪ್ರಾಯಗಳು ಪಕ್ಷದ ನಾಯಕರಿಂದ ಕೇಳಿ ಬಂದಿದ್ದು, ಅರ್ಹರಲ್ಲಿ ಪ್ರಮುಖರು ಯಾರು ಎಂಬ ಪ್ರಶ್ನೆಗೆ, ಸಮಯವಿದೆ. ಮಾ.10ರೊಳಗೆ ಸ್ಪಷ್ಟವಾಗಲಿದೆ ಎಂಬ ಉತ್ತರಗಳು ಕೇಳಿ ಬರುತ್ತಿದೆ. ಪಾಣೆಮಂಗಳೂರಿಗೆ ಮಣೆ: ದೀರ್ಘ ಅವಧಿಯಿಂದ ಪಾಣೆ ಮಂಗಳೂರಿಗೆ ಅಧ್ಯಕ್ಷ, ಉಪಾಧ್ಯಕ್ಷ ಪ್ರಾತಿನಿಧ್ಯ ದಕ್ಕಿಲ್ಲ. ಪಾಣೆಮಂಗಳೂರನ್ನು ಪ್ರತಿನಿಧಿಸಿದ್ದ ದಿ.ಪಿ.ಡಿ.ಶೆಣೈ (1984) ಅಧ್ಯಕ್ಷರಾಗಿದ್ದು ಬಿಟ್ಟರೆ ಸುದೀರ್ಘ ಅವಧಿಯಿಂದ ವಂಚಿತವಾಗಿದೆ. ಈ ಕೊರತೆಯನ್ನು ಈ ಸಲ ತುಂಬಿಸಿಕೊಡುವ ಪ್ರಯತ್ನ ನಡೆಯುತ್ತಿದ್ದು, ಪಾಣೆಮಂಗಳೂರಿಗೆ ಉಪಾಧ್ಯಕ್ಷೆ ಸ್ಥಾನ ಕೊಡುವ ದೃಢವಾದ ಮಾತುಗಳು ಕೇಳಿ ಬರುತ್ತಿದೆ. ಠುಸ್ಸಾದ ಸ್ಥಾಯಿ ಸಮಿತಿ: ಪುರಸಭೆಯ ಆಡಳಿತ ಪಕ್ಷದ ಸದಸ್ಯರಲ್ಲೇ ಭಿನ್ನಾ ಭಿಪ್ರಾಯವಿದ್ದು, ಇದಕ್ಕೆ ಪೂರಕ ಎಂಬಂತೆ ಪ್ರಥಮ ಆಡಳಿತ ಅವಧಿಯ ಎರಡೂವರೆ ವರ್ಷದಲ್ಲಿ ಸ್ಥಾಯಿ ಸಮಿತಿಯೇ ಅಸ್ತಿತ್ವಕ್ಕೆ ಬಂದಿಲ್ಲ. ಈ ವಿಚಾರದಲ್ಲಿ ಸಚಿವ ರೈಯ ಸೂಚನೆಯು ಪಾಲನೆಯಾಗಿಲ್ಲ. ಸಾಮಾನ್ಯ ಸಭೆಯಲ್ಲಿ ಎರಡೆರಡು ಬಾರಿ ಪ್ರಸ್ತಾಪವಾದರೂ ಆಡಳಿತ ಪಕ್ಷದ ಸದಸ್ಯರಲ್ಲಿ ಸಹಮತ ವ್ಯಕ್ತವಾಗದಿದ್ದರಿಂದ ಸ್ಥಾಯಿ ಸಮಿತಿ ರಚನೆಯು ಠುಸ್ಸಾಗಿತ್ತು. ಹಾಗಾಗಿ ಎರಡನೆ ಅವಧಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಸ್ಥಳೀಯ ಮುಖಂಡರು ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿಶ್ಚಯಿಸಿದ್ದಾರೆ. ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಚಿವ ರೈಯವರೇ ಹೈಕಮಾಂಡ್ ಆಗಿರುವುದರಿಂದ ಇಲ್ಲಿ ಇವರ ಮಾತೇ ಅಂತಿಮ. ಕಾಂಗ್ರೆಸ್ ಬಹುಮತ: 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳೊಂದಿಗೆ ಬಹುಮತ ಹೊಂದಿದೆ. ಉಳಿದಂತೆ ಬಿಜೆಪಿ 5, ಎಸ್‌ಡಿಪಿಐ 3, ಜೆಡಿಎಸ್ 1, ಪಕ್ಷೇತರ 1 ಸದಸ್ಯರಿದ್ದಾರೆ.





