ಸಾಮಾಜಿಕ ಜಾಲತಾಣಗಳಲ್ಲಿ ‘ರಾಜಕೀಯ’ ಬೇಡ
ಸಿಬ್ಬಂದಿಗೆ ಐಟಿಬಿಪಿ ಆದೇಶ
ಹೊಸದಿಲ್ಲಿ, ಮಾ.6: ದತ್ತಾಂಶ ಸೋರಿಕೆ ಹಾಗೂ ಸೈಬರ್ ಬೆದರಿಕೆಯ ಅಪಾಯವನ್ನು ತಡೆಗಟ್ಟುವ ಉದ್ದೇಶ ದಿಂದ ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದರಿಂದ ದೂರವುಳಿಯುವಂತೆ ಇಂಡೊ-ಟಿಬೆಟಿಯನ್ ಗಡಿಭದ್ರತಾ ಪೊಲೀಸ್ (ಐಟಿಬಿಪಿ) ಪಡೆಯು ತನ್ನ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡಿದೆ.
ಚೀನಾದ ಜೊತೆಗಿನ ಭಾರತದ ಗಡಿಯನ್ನು ಕಾಯುವ ಐಟಿಬಿಪಿಯು ಆಂತರಿಕ ಭದ್ರತೆ ಹಾಗೂ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಕೂಡಾ ನಿರ್ವಹಿಸುತ್ತಿದೆ.
ಅಧಿಕೃತ ಛಾಯಾಚಿತ್ರಗಳು ಹಾಗೂ ದಾಖಲೆಗಳನ್ನು ಫೇಸ್‌ಬುಕ್, ಟ್ವಿಟರ್, ಲಿಂಕ್‌ಡೆನ್, ಗೂಗಲ್ ಪ್ಲಸ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ, ವಿಕಿಪಿಡಿಯಾಗಳಲ್ಲಿ ಅಪ್‌ಲೋಡ್ ಮಾಡಬಾರದೆಂದು ಐಟಿಬಿಪಿ ತನ್ನ ಸಿಬ್ಬಂದಿಗೆ ಹೊಸತಾಗಿ ಸೂಚನೆಗಳನ್ನು ನೀಡಿದೆ. ಅಪ್ರಾಪ್ತ ವಯಸ್ಕರನ್ನು ಶೋಷಿಸುವ, ಅಶ್ಲೀಲ ಹಾಗೂ ದ್ವೇಷಪೂರಿತ ವಿಷಯಗಳು ಸೇರಿದಂತೆ ಸಿಬ್ಬಂದಿಯು ಯಾವುದೇ ನಕಾರಾತ್ಮಕವಾದ ಅಥವಾ ಅನಪೇಕ್ಷಿತ ಘಟನೆಗಳನ್ನು ಪ್ರಕಟಿಸಕೂಡದು ಹಾಗೂ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಕೂಡದೆಂದು ಹೇಳಿಕೆ ತಿಳಿಸಿದೆ.







