ಮಧ್ಯ-ಬಯಲು ಸೀಮೆ: ನೀರಾವರಿ ನಿಗಮ ಸ್ಥಾಪನೆ

ಎತ್ತಿನಹೊಳೆ ಯೋಜನೆ ಜಾರಿಗೆ ಬದ್ಧ: ಸಿದ್ದರಾಮಯ್ಯ
ಹೋರಾಟ ಕೈ ಬಿಡುವಂತೆ ರೈತರಿಗೆ ಮುಖ್ಯಮಂತ್ರಿ ಮನವಿ
ಬೆಂಗಳೂರು, ಮಾ.6: ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಎತ್ತಿನಹೊಳೆ ಯೋಜನೆ ಜಾರಿ ಮಾಡಲು ಸರಕಾರ ಬದ್ಧವಾಗಿದ್ದು, ಈ ಸಂಬಂಧ ಮಧ್ಯ ಹಾಗೂ ಬಯಲು ಸೀಮೆ ನೀರಾವರಿ ನಿಗಮವನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೊಳಪಡುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ ಶಾಸಕರು, ಸಂಸದರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಯಲು ಸೀಮೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನೀರಾವರಿ ನಿಗಮವನ್ನು ಸ್ಥಾಪನೆ ಮಾಡಲಾಗುವುದು. ಎತ್ತಿನಹೊಳೆ ಯೋಜನೆಯನ್ನು ನಮ್ಮ ಸರಕಾರ ಆದ್ಯತೆಯನ್ನಾಗಿ ಪರಿಗಣಿಸಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತ್ವರಿತಗತಿಯಲ್ಲಿ ಪ್ರಾಮಾಣಿಕವಾಗಿ ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.
ಕೇಂದ್ರ ಸರಕಾರದ ಭೂ ಸ್ವಾಧೀನ ಕಾಯ್ದೆ ಅನುಷ್ಠಾನದಲ್ಲಿನ ಗೊಂದಲ, ಹಸಿರು ನ್ಯಾಯಾಧೀಕರಣದ ತಡೆಯಾಜ್ಞೆಯಿಂದಾಗಿ ಸುಮಾರು ಒಂದೂವರೆ ವರ್ಷ ಎತ್ತಿನ ಹೊಳೆ ಯೋಜನೆ ವಿಳಂಬವಾಯಿತು. ಇದೀಗ, ಎಲ್ಲ ರೀತಿಯ ಅಡೆತಡೆಗಳು ನಿವಾರಣೆಯಾಗಿದ್ದು, ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಇದಲ್ಲದೆ, ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ 1,280 ಕೋಟಿ ರೂ.ಮೀಸಲಿಡಲಾಗಿದ್ದು, ಮುಂದಿನ ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, 14 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಮೂರು ತಿಂಗಳಲ್ಲಿ ವಿವರವಾದ ಯೋಜನಾ ವರದಿ ಸಿದ್ಧಗೊಳ್ಳಲಿದೆ. ನಮ್ಮ ಸರಕಾರವು ರೈತರ ಪರವಾಗಿದ್ದು, ಅವರನ್ನು ಹತ್ತಿಕ್ಕುವ ಕೆಲಸವನ್ನು ಕನಸಿನಲ್ಲಿಯೂ ಮಾಡುವುದಿಲ್ಲ. ಆದುದರಿಂದ, ರೈತರು ಈ ಅನಿರ್ದಿಷ್ಟಾವಧಿ ಹೋರಾಟವನ್ನು ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ಸಮನ್ವಯ ಸಮಿತಿ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ರೈತರು, ಹೋರಾಟಗಾರರು, ತಜ್ಞರನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗುವುದು. ಈ ಸಮಿತಿಯ ರೂಪುರೇಷೆಗಳ ಬಗ್ಗೆ ಆದಷ್ಟು ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಯೋಜನೆಗೆ ಬದ್ಧ: ಇದಕ್ಕೂ ಮುಂಚಿತವಾಗಿ ರೈತರು, ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ, 13 ಸಾವಿರ ಕೋಟಿ ರೂ.ವೆಚ್ಚದ ಎತ್ತಿನಹೊಳೆ ಯೋಜನೆಗೆ ಈಗಾಗಲೇ ಟೆಂಡರ್ ಕರೆದು, 1,800 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ರೋಷನ್‌ಬೇಗ್, ವಿಧಾನಸಭೆಯ ಉಪಾಧ್ಯಕ್ಷ ಶಿವಶಂಕರರೆಡ್ಡಿ, ಸಂಸದರಾದ ಕೆ.ಎಚ್.ಮುನಿಯಪ್ಪ, ಎಂ. ವೀರಪ್ಪಮೊಯ್ಲಿ, ಶಾಸಕರಾದ ರಮೇಶ್‌ಕುಮಾರ್, ಡಾ.ಸುಧಾಕರ್, ಮಂಜುನಾಥಗೌಡ, ಜೆ.ಕೆ.ಕೃಷ್ಣರೆಡ್ಡಿ, ಎನ್.ವೈ.ನಾರಾಯಣಸ್ವಾಮಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವೀರಪ್ಪಮೊಯ್ಲಿಗೆ ತರಾಟೆ
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರು, ಜನಪ್ರತಿನಿಧಿಗಳು, ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿಗೆ ಹೋರಾಟಗಾರರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಭರವಸೆ ನೀಡಿ ಎರಡು ಬಾರಿ ಚಿಕ್ಕಬಳ್ಳಾಪುರದಿಂದ ಸಂಸದರಾಗಿ ಆಯ್ಕೆಯಾಗಿರುವ ವೀರಪ್ಪಮೊಯ್ಲಿ, ಯೋಜನೆಯನ್ನು ಮಾತ್ರ ಅನುಷ್ಠಾನಕ್ಕೆ ತಾರದೆ, ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಸಭೆಯಿಂದ ಅರ್ಧಕ್ಕೆ ನಿಗರ್ಮಸಿದರು ಎಂದು ತಿಳಿದು ಬಂದಿದೆ.







