ಪುತ್ರನ ಅಘೋಷಿತ ಆಸ್ತಿಯನ್ನು ಸರಕಾರಕ್ಕೆ 1 ರೂ.ಗೆ ನೀಡುವೆ
ಚಿದಂಬರಂ ಸವಾಲು

ಹೊಸದಿಲ್ಲಿ,ಮಾ.6: ತನ್ನ ಪುತ್ರ ಕಾರ್ತಿ ಚಿದಂಬರಂ ಅಘೋಷಿತ ಸಂಪತ್ತನ್ನು ಹೊಂದಿದ್ದಾರೆಂಬ ಆರೋಪಗಳು ಅನಾಗರಿಕ ಹಾಗೂ ವಿವೇಚನಾ ರಹಿತವಾದುದೆಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ರವಿವಾರ ಆಪಾದಿಸಿದ್ದಾರೆ. ಕಾರ್ತಿಯು ಆದಾಯ ತೆರಿಗೆ ಇಲಾಖೆಯ ಕಾನೂನು ಹಾಗೂ ನಿಯಮ ಗಳಿಗೆ ಸಂಪೂರ್ಣವಾಗಿ ಬದ್ಧ ವಾಗಿರುವ ಸಕ್ರಮ ಉದ್ಯಮ ವೊಂದನ್ನು ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಕಾರ್ತಿ ನನ್ನ ಮಗನೆಂಬ ಏಕೈಕ ಕಾರಣಕ್ಕಾಗಿ, ಆತನನ್ನು ಗುರಿಯಿಡಲಾಗುತ್ತಿದೆಯಾದರೂ, ಅವರ ನಿಜವಾದ ಲಕ್ಷ ನಾನಾಗಿದ್ದೇನೆ ಎಂದು ಚಿದಂಬರಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ ಅಂತಿಮವಾಗಿ ಸತ್ಯವು ಗೆಲ್ಲಲಿದೆಯೆಂದು ಅವರು ಹೇಳಿದ್ದರೆ. ಒಂದು ವೇಳೆ ತನ್ನ ಪುತ್ರ ಯಾವುದೇ ಅಘೋಷಿತ ಆಸ್ತಿ ಹೊಂದಿದ್ದಲ್ಲಿ, ಅದನ್ನು ಕೇವಲ 1 ರೂ. ಶುಲ್ಕಕ್ಕೆ ಸರಕಾರಕ್ಕೆ ಹಸ್ತಾಂತರಿಸಲು ಆತ ಸಿದ್ಧನಿರುವುದಾಗಿ ಚಿದಂಬರಂ ಸವಾಲೊಡ್ಡಿದ್ದಾರೆ.
‘‘ಒಂದು ವೇಳೆ ಕಾರ್ತಿ ಅಘೋಷಿತ ಸಂಪತ್ತನ್ನು ಹೊಂದಿದ್ದಾರೆಂದು ಸರಕಾರ ಭಾವಿಸಿದ್ದರೆ, ಅಂತಹ ಅಘೋಷಿತ ಆಸ್ತಿಗಳ ಪಟ್ಟಿಯನ್ನು ತಯಾರಿಸುವಂತೆ ನಾನು ಸರಕಾರವನ್ನು ಕೇಳಲಿದ್ದೇನೆ. ಈ ಆಸ್ತಿಗಳನ್ನು ಸರಕಾರಕ್ಕೆ ವರ್ಗಾಯಿಸಲು ಅಗತ್ಯ ವಿರುವಂತಹ ಯಾವುದೇ ದಾಖಲೆ ಪತ್ರವನ್ನು ಕಾರ್ತಿ ಸ್ವಯಂ ಪ್ರೇರಿತವಾಗಿ, ಕೇವಲ 1 ರೂ. ಸಾಂಕೇತಿಕ ಮೊತ್ತಕ್ಕೆ ಅದನ್ನು ಸರಕಾರಕ್ಕೆ ವರ್ಗಾಯಿಸುವರು’’ ಎಂದು ಚಿದಂಬರಂ ಹೇಳಿದ್ದಾರೆ. ಆ ಆಘೋಷಿತ ಅಸ್ತಿಯ ಒಡೆತನ ಸರಕಾರಕ್ಕೆ ದೊರೆಯಲಿ ಎಂದವರು ಸವಾಲೊಡ್ಡಿದರು.
ತನ್ನ ಪುತ್ರನು ಪಿತ್ರಾರ್ಜಿತ ಆಸ್ತಿಯ ಜೊತೆಗೆ ಕಾನೂನುಬದ್ಧವಾದ ಉದ್ಯಮವನ್ನು ಸಹ ನಡೆಸುತ್ತಿದ್ದಾನೆ. ತನ್ನ ಪುತ್ರನು ಹಲವು ವರ್ಷಗಳಿಂದ ಆದಾಯ ತೆರಿಗೆ ಪಾವತಿದಾರನಾಗಿದ್ದು, ನಿಯಮಿತವಾಗಿ ತನ್ನ ಆದಾಯ ತೆರಿಗೆಯ ವಿವರಗಳನ್ನು ಸಲ್ಲಿಸುತ್ತಿದ್ದಾನೆಂದು ಚಿದಂಬರಂ ತಿಳಿಸಿದರು.
ಈ ಆರೋಪಗಳ ಹಿಂದೆ ರಾಜಕೀಯ ಉದ್ದೇಶವಿದೆಯೆಂಬುದು ತನಗೆ ತಿಳಿದಿದೆ. ಇಂತಹ ಸುಳ್ಳು ಆಪಾದನೆಗಳನ್ನು ಮಾಡು ತ್ತಿರುವವರ ಬಗ್ಗೆ ನನಗೆ ಕನಿಕರವಲ್ಲದೆ ಮತ್ತೇನೂ ಇಲ್ಲವೆಂದು ಅವರು ಹೇಳಿದ್ದಾರೆ. ಅಪಾರ ಪ್ರಮಾಣದ ಅಘೋಷಿತ ಸಂಪತ್ತನ್ನು ಹೊಂದಿರುವ ಕಾರ್ತಿ ಚಿದಂಬರಂ ವಿರುದ್ಧ ತನಿಖೆ ನಡೆಸಬೇಕೆಂದು ಎಡಿಎಂಕೆ ಹಾಗೂ ಬಿಜೆಡಿ ಆಗ್ರಹಿಸಿ, ಸದನದಲ್ಲಿ ಗದ್ದಲ ವೆಬ್ಬಿಸಿದ್ದರಿಂದ ಸದನದ ಕಲಾಪಗಳಿಗೆ ಅಡ್ಡಿಯುಂಟಾಗಿತ್ತು.







