ಬೇರೆ ಜಾತಿಯವನೊಂದಿಗೆ ವಿವಾಹ; ವ್ಯಕ್ತಿಯಿಂದ ಸೋದರಿಯ ಸಜೀವ ದಹನ
ಜೈಪುರ: ಎಂಟು ವರ್ಷಗಳ ಹಿಂದೆ, ಮನೆ ಬಿಟ್ಟೋಡಿ ಬೇರೆ ಜಾತಿಯವನೊಬ್ಬನನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು ತನ್ನ ಗ್ರಾಮಕ್ಕೆ ಹಿಂದಿರುಗಿದಾಗ ಅವಳಿಗೆ ಸ್ವಂತ ಸೋದರರೇ ಮೃತ್ಯುವಾಗಿದ್ದಾರೆ.
ದಕ್ಷಿಣ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ಈ ಅಮಾನುಷ ಕೃತ್ಯ ನಡೆದಿದೆ. ಈ ಸಂಬಂಧ ಪೊಲೀಸರು ಮಹಿಳೆಯ ಸೋದರ ಹಾಗೂ 6 ಮಂದಿ ಸೋದರ ಸಂಬಂಧಿಗಳನ್ನು ಬಂಧಿಸಿದ್ದಾರೆ.
ರಾಮೇಶ್ವರಿ ದೇವಿ ಅಲಿಯಾಸ್ ರಾಮೊ ಎಂಬ ಮಹಿಳೆಯನ್ನು, ಆಕೆಯ ಸೋದರ ಲಕ್ಷ್ಮಣ ಸಿಂಗ್ ಹಾಗೂ ಇತರ 6 ಮಂದಿ ಸೋದರ ಸಂಬಂಧಿಗಳು ಬೆಂಕಿ ಹಚ್ಚಿ ಕೊಂದಿದ್ದಾರೆ. ಆಕೆ ತನ್ನ 3ರ ಹರೆಯದ ಮಗನೊಂದಿಗೆ ತವರಿಗೆ ಮರಳಿದ್ದಳು.
ರಜಪೂತ ಸಮುದಾಯದ ರಾಮೇಶ್ವರಿ, ಪ್ರದೇಶದ ಬ್ರಾಹ್ಮಣ ಹುಡುಗನೊಬ್ಬನನ್ನು 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾದ ಬಳಿಕ ಪಟ್ಲಾಸಾ ಗ್ರಾಮವನ್ನು ಬಿಟ್ಟು ಹೋಗಿದ್ದಳು. ಈ ಮದುವೆಗೆ ಮನೆಯವರ ವಿರೋಧವಿತ್ತೆಂದು ಡುಂಗರ್‌ಪುರದ ಪೊಲೀಸ್ ಅಧೀಕ್ಷಕ ಮಧೋ ಸಿಂಗ್ ಸೋಧಾ ತಿಳಿಸಿದ್ದಾರೆ.
ರಾಮೇಶ್ವರಿಯ ಅತ್ತೆ, ಕಲಾವತಿ ಎಂಬಾಕೆ ಪೊಲೀಸ್ ದೂರೊಂದನ್ನು ದಾಖಲಿಸಿದ್ದಳು. ರಾಮೇಶ್ವರಿಯನ್ನು ಲಕ್ಷ್ಮಣ ಸಿಂಗ್, ಪರ್ವೀನ್ ಸಿಂಗ್, ಕಲ್ಯಾಣ್ ಸಿಂಗ್, ಈಶ್ವರ ಸಿಂಗ್, ಮಹೇಂದ್ರ ಸಿಂಗ್, ಭೂಪಾಲ ಸಿಂಗ್ ಹಾಗೂ ಗಜೇಂದ್ರ ಸಿಂಗ್ ಎಂಬವರು ಬೆಂಕಿ ಹಚ್ಚಿ ಕೊಂದರೆಂದು ಅದರಲ್ಲಾಕೆ ಆರೋಪಿಸಿದ್ದಾರೆ.
ತನ್ನ ಹಿರಿಯ ಮಗ ಪ್ರಕಾಶ್ ಸೇವಕ್ ಎಂಬಾತ ರಾಮೇಶ್ವರಿಯನ್ನು ಮದುವೆಯಾಗಿದ್ದನು. ಆ ಬಳಿಕ ಅವರಿಬ್ಬರೂ ಬೇರೆ ಗ್ರಾಮದಲ್ಲಿ ವಾಸಿಸುತ್ತಿದ್ದರೆಂದು ಕಲಾವತಿ ಹೇಳಿದ್ದಾಳೆ.
ಮಾ.3ರಂದು ರಾಮೇಶ್ವರಿ ತನ್ನ 3ರ ಹರೆಯದ ಮಗನೊಂದಿಗೆ ಅತ್ತೆ-ಮಾವನ ಭೇಟಿಯಾಗಿ ಬಂದಿದ್ದಳು.
ಮಾ.4ರಂದು ಕಲಾವತಿ ತನ್ನ ಸಣ್ಣ ಮಗ-ಸೊಸೆ ಹಾಗೂ ರಾಮೇಶ್ವರಿಯೊಂದಿಗೆ ಮನೆಯ ಹೊರಗೆ ಕುಳಿತ್ತಿದ್ದಾಗ, ಸುಮಾರು 30 ಮಂದಿಯೊಂದಿಗೆ ಅಲ್ಲಿಗೆ ಬಂದ ಲಕ್ಷ್ಮಣ, ಸೋದರಿಯನ್ನು ದೇವಾಲಯವೊಂದರ ಸಮೀಪಕ್ಕೆ ಎಳೆದೊಯ್ದನು. ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದನು.
ಮಹಿಳೆಯೊಬ್ಬಳನ್ನು ದಹಿಸಿದ ಬಗ್ಗೆ ತಮಗೆ ಮಾ.4ರ ರಾತ್ರಿ ದೂರವಾಣಿ ಕರೆಯೊಂದು ಬಂದಿತ್ತು. ಪೊಲೀಸರು ಗ್ರಾಮಕ್ಕೆ ತಲುಪಿ, ಪ್ರಕರಣದ ತನಿಖೆ ನಡೆಸಿದರು. ಪೊಲೀಸರು ಇತರ ಹಲವರ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆಯಿದೆಯೆಂದು ಆಸ್ಪುರದ ಎಎಸ್‌ಐ ರವಿಶಂಕರ್ ತಿಳಿಸಿದ್ದಾರೆ.





