ಕೇರಳ: ವಿಮಾನಕ್ಕೆ ಲೇಸರ್ ‘ಡೇಂಜರ್’
ಉನ್ನತಮಟ್ಟದ ತನಿಖೆ ಸಂಭವ

ಹೊಸದಿಲ್ಲಿ,ಮಾ.6: ಮೂರು ದಿನಗಳ ಹಿಂದೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದೊಳಗೆ ಲೇಸರ್‌ಕಿರಣವನ್ನು ಹಾಯಿಸಿದ ಘಟನೆಯ ಕುರಿತು ಕೇರಳ ಪೊಲೀಸರು ನಡೆಸುತ್ತಿರುವ ತನಿಖೆಯು ಯಾವುದೇ ಪ್ರಗತಿಯನ್ನು ಸಾಧಿಸದ ಹಿನ್ನೆಲೆಯಲ್ಲಿ ಅದನ್ನು ಕೇಂದ್ರೀಯ ತನಿಖಾ ಸಂಸ್ಥೆಯೊಂದಕ್ಕೆ ಹಸ್ತಾಂತರಿಸುವ ಸಾಧ್ಯತೆಗಳು ದಟ್ಟವಾಗಿವೆ. ನಾಗರಿಕ ವಾಯುಯಾನ ಸಂಸ್ಥೆಯ ಮಹಾನಿರ್ದೇಶಕರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಾಗರಿಕ ವಾಯುಯಾನ ಭದ್ರತಾದಳಕ್ಕೆ ಸೂಚನೆ ನೀಡಿದ್ದಾರೆ.
ವಿಮಾನದೊಳಗೆ ಲೇಸರ್ ಕಿರಣವನ್ನು ಹಾಯಿಸಿದ ಘಟನೆ ವರದಿಯಾಗಿರುವುದು ದೇಶದಲ್ಲೇ ಇದು ಮೊದಲ ಸಲವಾಗಿದೆ. ಈ ಬಗ್ಗೆ ಗುರುವಾರವೇ ದೂರು ಸಲ್ಲಿಸ ಲಾಗಿತ್ತಾದರೂ, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಬಳಿಕವಷ್ಟೇ ಘಟನೆಯು ಬೆಳಕಿಗೆ ಬಂದಿತ್ತು.
ಕಳೆದ ತಿಂಗಳು ಕಾಕ್‌ಪಿಟ್‌ನೊಳಗೆ ಲೇಸರ್ ಕಿರಣವನ್ನು ಹಾಯಿಸಲಾಯಿತೆಂಬ ಕಾರಣಕ್ಕಾಗಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ವಿಮಾನವನ್ನು, ಹಿತ್ರೋ ವಿಮಾನನಿಲ್ದಾಣಕ್ಕೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಲೇಸರ್ ಕಿರಣವನ್ನು ಹಾಯಿಸುವುದರಿಂದ ಕಾಕ್‌ಪಿಟ್ ಸಿಬ್ಬಂದಿಗೆ ಆರೋಗ್ಯದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಲೇಸರ್ ಕಿರಣಗಳ ನೆರವಿನಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ವಿಮಾನದ ಮೇಲೆ ಗುರಿಯಿಡುವ ಅಪಾಯವೂ ಇದೆಯೆಂದು ವಿಮಾನಯಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಿಮಾನಮಾರ್ಗಗಳ ಸಮೀಪ ಲೇಸರ್‌ಕಿರಣಗಳನ್ನು ಪ್ರದರ್ಶಿಸುವುದನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ.
ಪ್ರಾಥಮಿಕ ಹಂತದ ತನಿಖೆಯ ಪ್ರಕಾರ 3 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಮೇಲೆ ಕಲ್ಲಿಕೋಟೆ ವಿಮಾನನಿಲ್ದಾಣದಿಂದ 15 ಕಿ.ಮೀ. ದೂರದ ಕೇರಳ ಪರಪ್ಪನಂಗಾಡಿ ಹಾಗೂ ಬೇಪೂರ್‌ಗಳ ನಡುವಿನ ಕರಾವಳಿ ಪ್ರದೇಶದಲ್ಲಿ ಲೇಸರ್‌ಕಿರಣವನ್ನು ಹಾಯಿಸಲಾಗಿತ್ತು. ಇದು ಕೇವಲ ತಮಾಷೆಯ ಕೃತ್ಯವೇ ಅಥವಾ ವಿಮಾನಕ್ಕೆ ಹಾನಿಮಾಡುವ ಉದ್ದೇಶವಿತ್ತೇ ಎಂಬ ಬಗ್ಗೆ ತಮಗೆ ಇನ್ನೂ ಖಚಿತ ಮಾಹಿತಿಯಿಲ್ಲವೆಂದು ಉತ್ತರ ಕೇರಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಘಟನೆಗಳನ್ನು ತಡೆಗಟ್ಟಲು ಈ ಪ್ರದೇಶದಲ್ಲಿ ಪೊಲೀಸರು ಜಾಗೃತಿ ಅಭಿಯಾನ ಕೂಡಾ ಆರಂಭಿಸಿದ್ದಾರೆ.







