ಕನ್ಹೇಯಾ ಕುಮಾರ್‌ಗೆ ಗುಂಡಿಕ್ಕಿದರೆ 11 ಲಕ್ಷ ರೂ. ನೀಡುವುದಾಗಿ ಹೇಳಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೇವಲ 150ರೂ.

ನವದೆಹಲಿ :ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮರ್ ನನ್ನು ಗುಂಡಿಕ್ಕಿ ಸಾಯಿಸಿದವರಿಗೆ ರೂ 11 ಲಕ್ಷ ನಗದು ಬಹುಮಾನ ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾನ ಬ್ಯಾಂಕ್ ಖಾತೆಯಲ್ಲಿ ಕೇವಲ ರೂ 150 ಇರುವುದಾಗಿ ತಿಳಿದು ಬಂದಿದೆಯೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಆತನ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರಿಗೆ ಆತ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿರುವುದಾಗಿಹಾಗೂ ಹಲವು ತಿಂಗಳುಗಳ ಬಾಡಿಗೆ ಬಾಕಿಯಿರಿಸಿದ್ದನೆಂದು ತಿಳಿದು ಬಂದಿದೆ.
ಕನ್ಹಯ್ಯನನ್ನು ಸಾಯಿಸುವವರಿಗೆರೂ 11 ಲಕ್ಷ ಕೊಡುವುದಾಗಿಘೋಷಿಸುವ ಕರಪತ್ರಗಳನ್ನು ನಗರದ ಕೆಲವು ಕಡೆ ಅಂಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸುತ್ತಲೇ ಶರ್ಮಾ ಭೂಗತನಾಗಿದ್ದಾನೆ. ಆತನ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದ್ದು ಕುಟುಂಬ ಸದಸ್ಯರು, ಸಂಬಂಧಿಗಳು ಹಾಗೂ ಸ್ನೇಹಿತರ ಸಂಪರ್ಕಕ್ಕೂ ಆತ ಸಿಗುತ್ತಿಲ್ಲ.
ಶರ್ಮಾ ಬಿಹಾರದ ಬೇಗುಸರಾಯ್ ನಿವಾಸಿಯಾಗಿದ್ದು ದೆಹಲಿ ಪೊಲೀಸರು ಆತನ ಊರಿಗೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದಾರೆ.
ರವಿವಾರ ದೆಹಲಿ ಪೊಲೀಸರ ತಂಡವೊಂದು ಆತನ ಬಾಡಿಗೆ ಮನೆಯಿರುವ ರೋಹಿಣಿ ಪ್ರದೇಶಕ್ಕೆ ತೆರಳಿದ್ದಾಗ ಆತನ ಮನೆ ಮಾಲಿಕ ಹಾಗೂ ಕೆಲವು ನೆರೆಹೊರೆಯವರು ಶರ್ಮಾ ತಾನು ಪ್ರಭಾವಿ ವ್ಯಕ್ತಿಹಾಗೂ ಬಲಪಂಥೀಯ ಉನ್ನತ ನಾಯಕರ ಸಂಪರ್ಕ ತನಗಿದೆಯೆಂದು ಬೊಗಳೆ ಬಿಡುತ್ತಿದ್ದನೆಂಬ ಮಾಹಿತಿ ನೀಡಿದ್ದಾರೆ.
ಶರ್ಮಾನಿಗೆ ಯಾವುದೇ ಆದಾಯ ಮೂಲವಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ತನ್ನ ಸ್ನೇಹಿತರಿಂದ ಹಣ ಎರವಲು ಪಡೆಯುತ್ತಿದ್ದ ಹಾಗೂ ಕೆಲವೊಮ್ಮೆ ಸ್ಥಳೀಯರ ಕೆಲಸವನ್ನು ಪೊಲೀಸ್ ಠಾಣೆಯಲ್ಲಿ ಅಥವಾ ಸರಕಾರಿ ಕಚೇರಿಗಳಲ್ಲಿ ಮಾಡಿ ಕೊಡುವುದಾಗಿ ಹೇಳಿ ಹಣ ಕೀಳುತ್ತಿದ್ದನೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶರ್ಮಾನನ್ನು ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ಶನಿವಾರಸಂಪರ್ಕಿಸಿದ್ದಾಗ ‘‘ದೇಶದ್ರೋಹಿ ಸಾಯಬೇಕೆಂಬುದು ನಮ್ಮ ಬಯಕೆ. ಆತ ದೇಶವಿರೋಧಿ ಘೋಷಣೆ ಮಾಡಿ ಭಾರತ ಮಾತೆಯನ್ನು ಅವಮಾನಿಸಿದ್ದಾನೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ ಆದರೆ ನ್ಯಾಯ ದೊರೆಯಲು ಬಹಳಷ್ಟು ಸಮಯ ಕಾಯಬೇಕು. ನಮಗೆ ಶೀಘ್ರ ನಿರ್ಧಾರ ಬೇಕು,’’ಎಂದಿದ್ದ.
ಕನ್ಹಯ್ಯನ ಮನೆ ಬೇಗುಸರಾಯ್‌ನಲ್ಲಿ ತನ್ನ ಮನೆಗಿಂತ ಕೇವಲ 10 ಕಿಮಿದೂರದಲ್ಲಿದೆಯೆಂದು ಶರ್ಮಾ ಹೇಳಿಕೊಂಡಿದ್ದ. ‘‘ನಮ್ಮ ನಾಡು ಇಂತಹ ದೇಶ ದ್ರೋಹಿಗಳಿಗೆ ಜನ್ಮ ನೀಡುವುದಿಲ್ಲ. ಆದುದರಿಂದ ನಾನು ಹೀಗೆ ಮಾಡ ಬಯಸಿದೆ,’’ಎಂದೂ ಹೇಳಿದ್ದ.







