ಪುರುಷ-ಮಹಿಳೆ ಹಲವು ವರ್ಷಗಳಿಂದ ಒಟ್ಟಿಗಿರುವುದನ್ನು ಮ್ಯಾರೆಜ್ ಫ್ರೂಪ್ ಆಗಿ ಪರಿಗಣಿಸಬಹುದು: ಮದ್ರಾಸ್ ಹೈಕೋರ್ಟ್

ಮದುರೈ, ಮಾ.7:ವಿವಾಹದ ಆಮಂತ್ರಣ ಪತ್ರ, ಫೋಟೊ ಇಲ್ಲದಿದ್ದರೂ , ಪುರುಷ-ಮಹಿಳೆ ಜೊತೆಯಾಗಿ ಹಲವು ವರ್ಷಗಳಿಂದ ಒಟ್ಟಿಗೆ ವಾಸವಾಗಿರುವುದನ್ನು ಮ್ಯಾರೆಜ್ ಫ್ರೂಪ್ ಆಗಿ ಪರಿಗಣಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮದ್ರಾಸ್ ಹೈಕೋರ್ಟ್‌ನ ಮದುರೈ ಬ್ರಾಂಚ್ ನ್ಯಾಯ ಪೀಠ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.
ಮಹಿಳೆಯೊಬ್ಬರು ತಿರುನೆಲ್‌ವೆಲ್ಲಿ ಕುಟುಂಬ ಕೋರ್ಟ್‌ಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ವಿವಾಹ ಆಗಿರುವುದಕ್ಕೆ ಪ್ರಮಾಣಪತ್ರ, ವಿವಾಹದ ಆಮಂತ್ರಣ ಪತ್ರ , ಫೋಟೊ ದಾಖಲೆಯನ್ನು ಹಾಜರುಪಡಿಸಿರಲಿಲ್ಲ. ಈ ಕಾರಣದಿಂದಾಗಿ ನ್ಯಾಯಾಲಯ ಅವರ ಅರ್ಜಿಯನ್ನು ತಳ್ಳಿ ಹಾಕಿತ್ತು.
ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಲೇರಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಸ್ಟೀಸ್ ಎಸ್.ಮಣಿಕುಮಾರ್ ಮತ್ತು ಜಸ್ಟೀಸ್ ಸಿ.ಟಿ. ಸೆಲ್ವಮ್ ಅವರನ್ನೊಳಗೊಂಡ ನ್ಯಾಯಪೀಠ ಕುಟುಂಬ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ, ಆದೇಶ ನೀಡಿದೆ.
ಮಹಿಳೆ ತಾನು ಇಂತಹ ವ್ಯಕ್ತಿಯ ಜೊತೆ ವಿವಾಹವಾಗಿರುವುದಾಗಿ ಮತ್ತು ಕಳೆದ 21ವರ್ಷಗಳಿಂದ ಒಟ್ಟಿಗೆ ನೆಲೆಸಿದ್ದ ತಮಗೆ ಇಬ್ಬರು ಮಕ್ಕಳು ಇರುವುದಾಗಿ ಹೇಳಿದ್ದರು. ಆದರೆ ಕುಟುಂಬ ನ್ಯಾಯಾಲಯ ಆಕೆಯ ವಾದವನ್ನು ತಿರಸ್ಕರಿಸಿತ್ತು.





