ಕ್ರೇಜಿವಾಲ್ ಮತ್ತು ರಾಹುಲ್ ಗಾಂಧಿಯನ್ನು ಗಡೀಪಾರು ಮಾಡಿ-ಗೋಪಾಲ್‌ಜೀ
ವಿಎಚ್‌ಪಿ, ಬಜರಂಗದಳದ ವತಿಯಿಂದ ರಾಷ್ಟ್ರ ಭಕ್ತಿ ಜಾಗೃತಿ ಜಾಥಾ, ಸಭೆ

ಪುತ್ತೂರು: ದೇಶದ ಜನತೆ ಎಂದಿಗೂ ದೇಶದ್ರೋಹಿಗಳ ಪರವಾಗಿರದೆ, ದೇಶಪ್ರೇಮಿಗಳ ಪರವಾಗಿದ್ದು, ದೇಶವನ್ನು ತುಂಡು ಮಾಡುತ್ತೇವೆ ಎಂದು ಹೊರಟವರ ನಾಲಿಗೆ ಸೀಳುತ್ತೇವೆ. ಅವರ ದೇಹವನ್ನು ತಂಡು ತುಂಡು ಮಾಡುತ್ತೇವೆ. ಜೆಎನ್‌ಯುನ ದೇಶದ್ರೋಹಿಗಳ ಪರವಾಗಿ ನಿಂತ ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ ಮತ್ತು ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ಅವರು ದೇಶದ್ರೋಹಿಗಳಾಗಿದ್ದು ಪೊಲೀಸರಿಗೆ ತಾಖತ್ತಿದ್ದರೆ ಅವರನ್ನು ದೇಶದಿಂದ ಗಡಿಪಾರು ಮಾಡಿ ಎಂದು ವಿಎಚ್‌ಪಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜೀ ಸವಾಲು ಹಾಕಿದರು. ಅವರು ಜೆಎನ್‌ಯು ಪ್ರಕರಣ ಮತ್ತು ಬಜರಂಗದಳದ ಜಿಲ್ಲಾ ಸಂಪರ್ಕ ಪ್ರಮುಖ ಧನ್ಯಕುಮಾರ್ ಅವರನ್ನು ಗಡಿಪಾರು ಮಾಡಿರುವುದನ್ನು ಖಂಡಿಸಿ ವಿಹಿಂಪ ಮತ್ತು ಬಜರಂಗದಳ ಜಿಲ್ಲಾ ಪ್ರಖಂಡದ ವತಿಯಿಂದ ಸೋಮವಾರ ಸಂಜೆ ಪುತ್ತೂರು ನಗರದ ದರ್ಬೆಯಲ್ಲಿ ನಡೆದ ‘ದೇಶ ಮೊದಲು’ ರಾಷ್ಟ್ರ ಭಕ್ತಿ ಜಾಗೃತಿ ಜಾಥಾ ಮತ್ತು ಸಭೆಯಲ್ಲಿ ಮಾತನಾಡಿದರು. ದೇಶದ್ರೋಹಿ ಅಫ್ಸಲ್ ಗುರುವಿಗೆ ಯುಪಿಎ ಸರ್ಕಾರ ಅಧಿಕಾರದಲ್ಲಿರುವಾಗ ಗಲ್ಲು ಶಿಕ್ಷೆ ನೀಡಲಾಗಿತ್ತು. ಇದೀಗ ರಾಹುಲ್ ಗಾಂಧಿ ಅಫ್ಸಲ್ ಪರ ಮಾತನಾಡುತ್ತಿರುವ, ಪಾಕಿಸ್ಥಾನಕ್ಕೆ ಜಿಂದಾಬಾದ್ ಎನ್ನುವ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುಲಾಮರಾಗಿರುವ ಪೊಲೀಸರು ದೇಶಪ್ರೇಮಿ ಯುವಕನಾಗಿರುವ ಧನ್ಯಕುಮಾರ್ ಅವರಿಗೆ ಗಡೀಪಾರು ಶಿಕ್ಷೆ ವಿಧಿಸುವ ಮೂಲಕ ಆತನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಧನ್ಯಕುಮಾರ್ ನಮ್ಮೆಲ್ಲರ ಧ್ವನಿಯಾಗಿದ್ದು, ಇಲ್ಲಿನ ಲವ್ ಜಿಹಾದಿಗಳ, ಅಕ್ರಮ ಗೋಸಾಗಾಟದಾರರ ಮತ್ತು ಅಸಹಿಷ್ಣುತೆ ಹೇಳಿಕೆ ನೀಡಿರುವ ಸಿನಿಮಾ ನಟರ ವಿರುದ್ದ ಧ್ವನಿ ಎತ್ತಿರುವುದಕ್ಕಾಗಿ ಅವರಿಗೆ ಗಡೀಪಾರು ಶಿಕ್ಷೆ ನೀಡಲಾಗಿದೆ. ಗೋವುಗಳ ರಕ್ಷಣೆಗಾಗಿ ಕಟುಕ ಮುಸಲ್ಮಾನರ ಕೈ ಕಡಿದ ಶಿವಾಜಿ ಮಹಾರಾಜ್ ನಮಗೆ ಆದರ್ಶವಾಗಿದ್ದು, ಇಂತಹ ಶಿಕ್ಷೆಗೆ ದೇಶಭಕ್ತ ಯುವಕರು ಶಿವಾಜಿ ಆದರ್ಶದಿಂದ ಹಿಂದೆ ಸರಿಯುವುದಿಲ್ಲ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಬಜರಂಗದಳದ ಜಿಲ್ಲಾಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ ಅವರು ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು, ದೇಶಭಕ್ತಿಯ ಯುವಕ ಧನ್ಯಕುಮಾರ್ ಅವರನ್ನು ಗಡೀಪಾರು ಮಾಡಿದಲ್ಲಿ ನಮ್ಮ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಇಂತಹ ನೂರಾರು ಧನ್ಯ ಕುಮಾರ್ ಅವರನ್ನು ಸೃಷ್ಟಿಸುವ ಶಕ್ತಿ ನಮಗಿದೆ. ಅವರ ಮೇಲಿನ ಗಡಿಪಾರು ಆದೇಶವನ್ನು ತಕ್ಷಣವೇ ಹಿಂದಕ್ಕೆ ಪಡೆಯದಿದ್ದಲ್ಲಿ ಪುತ್ತೂರಿಗೆ ಬಂದ್ ಬೇಕೇ ಬೇಡವೇ ಎಂದು ನಾವು ತೀರ್ಮಾನಿಸುತ್ತೇವೆ ಎಂದರು. ಮಂಗಳೂರು ಯುವ ಬ್ರಿಗೇಡ್ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿಎಚ್‌ಪಿ ಮಾತೃ ಮಂಡಳಿ ಸದಸ್ಯೆ ಮೋಹಿನಿ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಪುತ್ತೂರು ಮಹಾಲಿಂಗೇಶ್ವರ ದೇವಳದ ಮುಂಬಾಗದಿಂದ ಮುಖ್ಯರಸ್ತೆಯಲ್ಲಿ ದರ್ಬೆಯ ತನಕ ಜಾಗೃತಿ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಸುಮಾರು 32 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಮೆರವಣಿಗೆಯಲ್ಲಿ ಕಾರ್ಯಕರ್ತರು ಸಾಗಿಸಿದರು. ವಿಎಚ್‌ಪಿ ಅಧ್ಯಕ್ಷ ಡೀಕಯ್ಯ ಪೆರ್ವೋಡಿ ಸ್ವಾಗತಿಸಿದರು.





