ಪುತ್ತೂರಿನ ಇಬ್ಬರು ರೌಡಿಗಳ ಗಡಿಪಾರು
ಪೊಲೀಸ್ ಇಲಾಖೆ ಆದೇಶ ಜಾರಿಮಾಡುವಂತೆ ಎಸಿ ಸೂಚನೆ
ಪುತ್ತೂರು: ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಕೋಮುಗಲಭೆ ನಡೆಸುತ್ತಿದ್ದ ಮತ್ತು ಗಲಭೆಗೆ ಪ್ರಚೋಧನೆ ನಡೆಸಿ ಗೂಂಡಾಗಿರಿ ಮಾಡುವ ಮೂಲಕ ರೌಇಡಗಳಾಗಿ ಮೆರೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಉಪವಿಭಾಗ ವ್ಯಾಪ್ತಿಯಿಂದ ಗಡಿಪಾರು ಮಾಡುವಂತೆ ಪೊಲೀಸ್ ಇಲಾಖೆಯ ಆದೇಶವನ್ನು ಎಸಿ ನ್ಯಾಯಾಲಯ ಎತ್ತಿಹಿಡಿದಿದ್ದು ಇಬ್ಬರನ್ನು ಗಿಡಪಾರು ಮಾಡುವಂತೆ ಆದೇಶ ನೀಡಿದೆ.
ಬೆಳಂದೂರಿನ ಧನ್ಯಕುಮಾರ್ ಮತ್ತು ಮೊಟ್ಟೆತ್ತಡ್ಕದ ಶಕೀಲ್ ಗಡಿಪಾರಾದ ರೌಡಿಗಳು.
ಧನ್ಯಕುಮಾರ್ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಇವನು ಪುತ್ತೂರಿನಲ್ಲಿ ನಡೆದ ಕೆಲವೊಂದು ಕೋಮುಗಲಭೆಯಲ್ಲಿ ಆರೋಪಿಯಾಗಿದ್ದ. ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸುವ ಮೂಲಕ ಗಲಭೆಗೂ ಪ್ರಚೋಧನೆ ನೀಡುತ್ತಿದ್ದ ಮತ್ತು ಈತನ ಮೇಲೆ ಪುತ್ತೂರು ನಗರ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ಕೇಸು ದಾಖಲಾಗಿತ್ತು. ಹಲವಾರು ಗಲಭೆಗಳಲ್ಲಿ ಭಾಗಿಯಾದ ಕಾರಣಕ್ಕೆ ರೌಡಿ ಲಿಸ್ಟ್‌ನಲ್ಲಿ ಈತನ ಹೆಸರು ಇತ್ತು. ರೌಡಿಗಳ ನಿಯಂತ್ರಣ ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಮತ್ತು ಕೋಮು ಸೌಹಾರ್ಧತೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧಾರವನ್ನು ಮಾಡಿದ್ದು ಅದರಂತೆ ಧನ್ಯ ಕುಮಾರ್ ಪುತ್ತೂರು ಶಕೀಲ್ ವಿರುದ್ದ ಗಿಡಪಾರು ಆದೇಶ ನೀಡಲಾಗಿದೆ. ಶಕೀಲ್ ಕೂಡಾ ಪುತ್ತೂರಿನಲ್ಲಿ ನಡೆದ ಹಲವು ಕೋಮುಗಲಭೆಗಳಲ್ಲಿ ಭಾಗಿಯಾಗಿದ್ದ ಆರೋಪಿ.
6 ತಿಂಗಳು ಕಾಣಿಸುವಂತಿಲ್ಲ
ಪುತ್ತೂರು ಉಪ ವಿಭಾಗ ಕ್ಷೇತ್ರ ವ್ಯಾಪ್ತಿಯಾದ ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಇವರಿಬ್ಬರೂ ಉಳಿದುಕೊಳ್ಳುವಂತಿಲ್ಲ. ಇವರನ್ನು ಯಾರಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರಕರಣಗಳಿಗೆ ಸಂಬಂಧಿಸಿ ಕೋರ್ಟಿಗೆ ಹಾಜರಾಗಬೆಕಾದರೆ ಏಸಿಯವರನ್ನು ಮುಖತ ಹಾಜರಾಗಿ ಅನುಮತಿ ಪಡೆದುಕೊಳ್ಳಬೇಕು. ಈ ವ್ಯಾಪ್ತಿಯಲ್ಲಿ ವಾಸ್ತವ್ಯವನ್ನು ಮಾಡುವುದು ಕಂಡು ಬಂದಲ್ಲಿ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬಹುದು ಅಥವಾ ಬಂಧಿಸಿ ಜೈಲಿಗೆ ಕಳುಹಿಸಲು ಅಧಿಕಾರವನ್ನು ನೀಡಲಾಗಿದೆ. ಆದೇಶದ ವಿರುದ್ದ ಆರೋಪಿಗಳು ಹೈಕೋರ್ಟು ಮೆಟ್ಟಿಲೇರಿದ್ದಾರೆ.





