ಕನ್ನಡ ಸಾಹಿತ್ಯ ನಿಘಂಟನ್ನು ಸುಟ್ಟು ಹಾಕಿ: ಐಜಿಪಿ ನಂಜುಂಡಸ್ವಾಮಿ

ತೀರ್ಥಹಳ್ಳಿ, ಮಾ. 7: ಕನ್ನಡ ನಿಘಂಟಿನ ನೆಪದಲ್ಲಿ ಮೂಲತಃ ಸಂಸ್ಕೃತದಲ್ಲಿನ ಪದಗಳನ್ನೇ ಕನ್ನಡ ಎಂದು ನಂಬಿಸುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ ತನ್ನ ಕನ್ನಡ ನಿಘಂಟಿನ ಮೂಲಕ ಮಾಡುತ್ತಿದೆ. ಅಪ್ಪಟ ಕನ್ನಡ ಇನ್ನು ಉಸಿರಾಡುತ್ತಿರುವುದು ಜನಸಾಮಾನ್ಯರ ಮೂಲಕ, ಆದರೆ ಅಂತಹ ಭಾಷೆ ಮತ್ತು ಸಾಹಿತ್ಯವನ್ನು ಜನಪದ ಎಂದು ಕೆಳದರ್ಜೆಗಿಳಿಸುವ ಹುನ್ನಾರ ಶಿಷ್ಟ ಸಾಹಿತ್ಯ ವಲಯದಿಂದ ನಡೆಯುತ್ತಿದೆ. ಇದು ಖಂಡನೀಯ, ಸಾಹಿತ್ಯ ಪರಿಷತ್‌ನ ಈ ಕನ್ನಡ ಸಾಹಿತ್ಯ ನಿಘಂಟನ್ನು ಸುಟ್ಟು ಹಾಕಬೇಕು ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬೊಬ್ಬಿ ಗ್ರಾಮದಲ್ಲಿ ನಡೆದ 2015-16ನೆ ಸಾಲಿನ ತಾಲೂಕು ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಂಜುಂಡಸ್ವಾಮಿ, ಕನ್ನಡ ಜನಪದ ವಿವಿ ಡಾ. ಅಂಬಳಿಕೆ ಹಿರಿಯಣ್ಣ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ನಿಜವಾಗಿಯೂ ಪ್ರತಿಯೊಂದು ಪ್ರದೇಶದಲ್ಲೂ ಆಯಾ ಪ್ರಾದೇಶಿಕ ಆಚಾರ-ವಿಚಾರಗಳ ಆಧಾರದ ಮೇಲೆ ಕನ್ನಡ ನಿಘಂಟನ್ನು ತಯಾರಿಸುವ ಕೆಲಸ ಶ್ಲಾಘನೀಯವಾಗಿ ನಡೆಯುತ್ತಿದೆ. ನಿಜವಾದ ಕನ್ನಡ ನಿಘಂಟು ಎಂದರೆ ಜಾನಪದ ವಿವಿ ಹೊರತಂದಿರುವ ಜಾನಪದ ಕನ್ನಡ ನಿಘಂಟು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಜಿ.ನಾಗರಾಜ ಕಾಮತ್ ಮಾತನಾಡಿ, ಬೊಬ್ಬಿಯಲ್ಲಿ ನಡೆದಿರುವ ಈ ಯುವಜನ ಮೇಳವನ್ನು ಕೇವಲ ಒಂದು ವಾರದ ಅವಧಿಯೊಳಗಾಗಿ ಸಂಘಟಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯುವಕ-ಯುವತಿ ಮಂಡಳಿಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಮುಂಚೆಯೇ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ.ಹಿರಿಯಣ್ಣನವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಬಿಳಿಗಿರಿ ವಿಜಯ್, ನೆರಟೂರು ಗ್ರಾಪಂ ಉಪಾಧ್ಯಕ್ಷ ಎಸ್.ವಿ.ಲೋಕೇಶ್, ಸದಸ್ಯರಾದ ಹೊನ್ನುಕೊಡಿಗೆ ಸುಂದರೇಶ್, ಚಂದ್ರಾವತಿ ಶೇಖರ್, ನ್ಯಾಷನಲ್ ಗ್ರೂಪ್ಸ್‌ನ ಇಬ್ರಾಹೀಂ ಶರ್ೀ, ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಮೇಶ್, ಯುವಜನ ಮೇಳ ಸ್ವಾಗತ ಸಮಿತಿ ಉಪಾಧ್ಯಕ್ಷ ಅಂಬಳಿಕೆ ಗಿರೀಶ್, ಖಜಾಂಚಿ ಡಿ.ವೆಂಕಟೇಶ್, ಜಿಪಂ ಸದಸ್ಯೆ ಭಾರತಿ ಪ್ರಭಾಕರ್, ತಾಪಂ ಸದಸ್ಯರಾದ ಶೃತಿ ವೆಂಕಟೇಶ್, ಚಂದವಳ್ಳಿ ಸೋಮಶೇಖರ್ ಉಪಸ್ಥಿತರಿದ್ದರು.
ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಅಂಬಳಿಕೆ ಹಿರಿಯಣ್ಣರನ್ನು ಸನ್ಮಾನಿಸುತ್ತಿರುವುದು








