ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ ಸ್ವಚ್ಛ ಮಾಡಲು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ: ಆಕ್ರೋಶ

ಬೆಂಗಳೂರು, ಮಾ. 7: ನಗರದ ಹಲಸೂರು ಕೆರೆಯಲ್ಲಿ ಕಳೆದ ಮೂರು ದಿನಗಳಿಂದ ಸಾವಿರಾರು ಸತ್ತ ಮೀನುಗಳು ದಡದಲ್ಲಿ ಕಂಡುಬರುತ್ತಿದ್ದು, ನಗರದ ಕೆರೆಗಳಲ್ಲಿ ಪರಿಸರ ಮಾಲಿನ್ಯ ಉಲ್ಬಣಾವಸ್ಥೆ ತಲುಪಿರುವುದರ ಸೂಚನೆಯಾಗಿದೆಯೆಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸರೋವರದಲ್ಲಿ ಬೇಸಿಗೆಯಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿರುವುದೇ ಮೀನುಗಳ ಮಾರಣಾಹೋಮಕ್ಕೆ ಕಾರಣವೆಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ವಾಮನ್ ಆಚಾರ್ಯ ತಿಳಿಸಿದ್ದಾರೆ. ಕೆರೆಗೆ ಹರಿದುಬರುತ್ತಿರುವ ಮಾಲಿನ್ಯ ಭರಿತ ಚರಂಡಿ ನೀರು ಮೀನುಗಳ ಸಾವಿಗೆ ಕಾರಣವಾಗುತ್ತಿದೆಯೆಂದು ಅವರು ಹೇಳಿದ್ದಾರೆ. ಎಂಜಿರೋಡ್ ಹಾಗೂ ಇಂದಿರಾನಗರ ಮಧ್ಯದ ಪ್ರದೇಶಗಳ ಚರಂಡಿ ನೀರು ರಾಜಕಾಲುಗೆ ಹಾಗೂ ಆನಂತರ ಹಲಸೂರು ಕೆರೆಗೆ ಹರಿದುಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಹಲಸೂರು ಸರೋವರದ ಒಡೆತನ ಹೊಂದಿರುವ ಬಿಬಿಎಂಪಿ ಹಾಗೂ ಬೆಂಗಳೂರು ಒಳಚಂರಡಿ ಮಂಡಳಿಯು, ಈ ಪ್ರದೇಶದಲ್ಲಿ ಚರಂಡಿ ನೀರು ಸಂಸ್ಕರಣ ಘಟಕವನ್ನು ಸ್ಥಾಪಿಸುವ ಮೂಲಕ ಕೆರೆಯು ಮಾಲಿನ್ಯಗೊಲ್ಳುವುದನ್ನು ತಪ್ಪಿಸಬಹುದು. ಆ ಮೂಲಕ ಅಗಾಧವಾದ ಮತ್ಸಸಂಪತ್ತನ್ನು ರಕ್ಷಿಸಬಹುದೆಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳ ಸಾವಿನಿಂದಾಗಿ, ಪರಿಸರವು ಗಬ್ಬುನಾತ ಬೀರುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಗೆ ಹೊರಗಡೆಯಿಂದ ಚರಂಡಿ ನೀರು ಬಂದು ಸೇರುತ್ತಿದೆ, ಅಕ್ಕ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ನೀರನ್ನು ಹಾಗೆಯೇ ಕೆರೆಗೆ ಬಿಡಲಾಗುತ್ತಿದೆ ಹಾಗೂ ಇತರೆ ಕಡೆಗಳಿಂದ ನೀರನ್ನು ನೇರವಾಗಿ ಕೆರೆಗೆ ಹರಿಸಲಾಗುತ್ತಿದೆ. ಆದ್ದರಿಂದ ಈ ನೀರು ಇಂದು ವಿಷವಾಗಿ ಮಾರ್ಪಾಡಾದ ಪರಿಣಾಮ ಮೀನುಗಳು ಸಾಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಮೀನು ಸಾಗಾಣಿಕೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಮೀನು ಸಾಗಾಣಿಕೆಗಾಗಿ ಮೀನುಗಳನ್ನು ತಂದು ಬಿಡಲಾಗಿದೆ. ಆದರೆ ಕೆರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೀನುಗಳು ಮರಣ ಹೊಂದುತ್ತಿವೆ ಎಂದು ನೆಪ ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಲುಷಿತ ನೀರು ಕೆರೆಗೆ ಸೇರಿ ಇಷ್ಟು ದೊಡ್ಡ ಅನಾಹುತ ನಡೆದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಜಲ ಮಂಡಳಿ, ಬಿಬಿಎಂಪಿ ಸುಮ್ಮನೆ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿರು, ಮರಣ ಹೊಂದಿರುವ ಮೀನುಗಳನ್ನು ಕೂಡಲೇ ತೆರವುಗೊಳಿಸಿ ಕೆರೆಯನ್ನು ಸ್ವಚ್ಛ ಮಾಡುವ ಮೂಲಕ ಸ್ಥಳೀಯ ನಿವಾಸಿಗಳಿಗೆ, ವಾಯುವಿಹಾರಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.







