ಉಡುಪಿ: ಬುಲೆಟ್‌ನಲ್ಲಿ ಏಕಾಂಗಿಯಾಗಿ ಮಹಿಳೆಯಿಂದ ದೇಶ ಸಂಚಾರ

ಉಡುಪಿ, ಮಾ.7: ಮಾನಸಿಕ ಖಿನ್ನತೆ ಹಾಗೂ ಆತ್ಮಹತ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬುಲೆಟ್‌ನಲ್ಲಿ ಏಕಾಂಗಿಯಾಗಿ ದೇಶ ಸಂಚಾರ ನಡೆಸುತ್ತಿರುವ ಗೋವಾದ ಸನಾ ಇಕ್ಬಾಲ್ ಇಂದು ಉಡುಪಿಗೆ ಆಗಮಿಸಿದ್ದಾರೆ.
ಮೂಲತಃ ಹೈದರಾಬಾದಿನವರಾದ ಸನಾ ಇಕ್ಬಾಲ್ ಮನ:ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗೂಗಲ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಈಕೆ ತದನಂತರ ಕಾರ್ಪೊರೇಟ್ ಕಂಪೆನಿಗಳಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ವಿವಾಹಿತೆಯಾಗಿರುವ ಇವರಿಗೆ ಒಂದು ಮಗುವಿದೆ.
ನ.23ರಂದು ಗೋವಾದಿಂದ ಏಕಾಂಗಿಯಾಗಿ ಬುಲೆಟ್‌ನಲ್ಲಿ ದೇಶ ಸಂಚಾರಕ್ಕೆ ಹೊರಟ ಸನಾ ಇಕ್ಬಾಲ್ ಈಗಾಗಲೇ ಉತ್ತರ ಭಾರತದ ಯಾತ್ರೆ ಮುಗಿಸಿದ್ದಾರೆ. ಇದೀಗ ದಕ್ಷಿಣ ಭಾರತಕ್ಕೆ ಕಾಲಿಸಿರುವ ಇವರು, ಮುಂದೆ ಈಶಾನ್ಯ ಭಾರತದತ್ತ ಪಯಣ ಬೆಳೆಸಲಿದ್ದಾರೆ.
ಈಗಾಗಲೇ ದೇಶದ 48 ನಗರಗಳಿಗೆ ಭೇಟಿ ನೀಡಿರುವ ಅವರು, ಬುಲೆಟ್ ನಲ್ಲಿ 17,000 ಕಿ.ಮೀ. ದೂರ ಕ್ರಮಿಸಿದ್ದಾರೆ. ತಾನು ಭೇಟಿ ನೀಡಿದ ನಗರಗಳಲ್ಲಿರುವ ಪ್ರಮುಖ ಕಾಲೇಜುಗಳಿಗೆ ತೆರಳಿ ಮಾನಸಿಕ ಖಿನ್ನತೆ ಹಾಗೂ ಆತ್ಮಹತ್ಯೆಯ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಒಟ್ಟು 85 ಕಾಲೇಜುಗಳಿಗೆ ಅವರು ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
ಉಡುಪಿಗೆ ಆಗಮಿಸಿದ ಇವರು ಮಣಿಪಾಲ ಹಾಗೂ ಉಡುಪಿಯ ಕಾಲೇಜುಗಳಲ್ಲಿ ಉಪನ್ಯಾಸ ನೀಡಲಿರುವರು. ನಂತರ ಮೈಸೂರಿಗೆ ತೆರಳಿ ಅಲ್ಲಿಂದ ದಕ್ಷಿಣ ಭಾರತದ ರಾಜ್ಯಗಳ ಯಾತ್ರೆ ಪೂರ್ಣಗೊಳಿಸಲಿದ್ದಾರೆ. ಮೇ ತಿಂಗಳಲ್ಲಿ ತನ್ನ ಹುಟ್ಟೂರಾದ ಹೈದರಾಬಾದಿನಲ್ಲಿ ಈ ಯಾತ್ರೆಯನ್ನು ಕೊನೆಗೊಳಿಸುವ ಉದ್ದೇಶವನ್ನು ಅವರು ಇಟ್ಟುಕೊಂಡಿದ್ದಾರೆ.





