ಟ್ವೆಂಟಿ-20 ವಿಶ್ವಕಪ್: ಪಾಕ್ ತಂಡಕ್ಕೆ ಶೆಹಝಾದ್ ವಾಪಸ್

ಕರಾಚಿ, ಮಾ.7: ಭಾರತದಲ್ಲಿ ಮಂಗಳವಾರ(ಮಾ.8) ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡಕ್ಕೆ ಆರಂಭಿಕ ದಾಂಡಿಗ ಅಹ್ಮದ್ ಶೆಹಝಾದ್ ವಾಪಸಾಗಿದ್ದಾರೆೆ. ಶೆಹಝಾದ್ ಬಾಂಗ್ಲಾದೇಶದಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಪಾಕ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಏಷ್ಯಾಕಪ್‌ನಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದ ಖುರ್ರಮ್ ಮಂಝೂರ್ ಬದಲಿಗೆ ಶೆಹಝಾದ್ ಆಯ್ಕೆಯಾಗಿದ್ದಾರೆ. ಶೆಹಝಾದ್ ಈ ವರ್ಷದ ಜನವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಆಡಿದ್ದರು. 40 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶೆಹಝಾದ್ 941 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಔಟಾಗದೆ 101 ರನ್ ಗಳಿಸಿದ್ದು, 4 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ರಿದಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರೂ ನಾಯಕತ್ವ ಉಳಿಸಿಕೊಂಡಿದ್ದಾರೆ. ಏಷ್ಯಾಕಪ್ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ಮುಹಮ್ಮದ್ ಹಫೀಝ್ ತಂಡದಲ್ಲಿ ಸ್ಥಾನ ಪಲ್ಲಟವಾಗಿಲ್ಲ.
ಪಾಕಿಸ್ತಾನ ತಂಡ: ಶಾಹಿದ್ ಅಫ್ರಿದಿ(ನಾಯಕ), ಶುಐಬ್ ಮಲಿಕ್, ಸರ್ಫರಾಝ್ ಅಹ್ಮದ್(ಉಪ ನಾಯಕ), ಮುಹಮ್ಮದ್ ಹಫೀಝ್, ಉಮರ್ ಅಕ್ಮಲ್, ಅಹ್ಮದ್ ಶೆಹಝಾದ್, ಶಾರ್ಜೀಲ್ ಖಾನ್, ಮುಹಮ್ಮದ್ ನವಾಝ್, ಇಮ್ಮಾದ್ ವಸೀಂ, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ಮುಹಮ್ಮದ್ ಆಮಿರ್, ವಹಾಬ್ ರಿಯಾಝ್,ಮುಹಮ್ಮದ್ ಸಮಿ, ಖಾಲಿದ್ ಲತೀಫ್.





