ಪಾಕಿಸ್ತಾನದಿಂದ 87 ಭಾರತೀಯರ ಬಿಡುಗಡೆ
ಹೊಸದಿಲ್ಲಿ. ಮಾ.7: ಪಾಕಿಸ್ತಾನವು ತನ್ನ ಜೈಲುಗಳಲ್ಲಿದ್ದ 87 ಭಾರತೀಯರನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಹೆಚ್ಚಿನವರು ಮೀನುಗಾರರಾಗಿದ್ದಾರೆ. ಪಾಕಿಸ್ತಾನದ ಜಲಗಡಿಯನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು.
ಈ 87 ಜನರನ್ನು ಕರಾಚಿಯ ಲಾಂಧಿ ಜೈಲಿನಿಂದ ರವಿವಾರ ಬಿಡುಗಡೆಗೊಳಿಸಲಾಗಿತ್ತು. ಸೋಮವಾರ ರೈಲಿನ ಮೂಲಕ ವಾಘಾ ಗಡಿಯನ್ನು ತಲುಪಿದ ಇವರನ್ನು ದಾಖಲೆಪತ್ರಗಳ ಪರಿಶೀಲನೆಯ ಬಳಿಕ ಪಾಕಿಸ್ತಾನ್ ರೇಂಜರ್ಸ್ ಅಧಿಕಾರಿಗಳು ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಹಸ್ತಾಂತರಿಸಿದರು.
ಈ 87 ಜನರು ಎರಡು ವರ್ಷಗಳಿಗೂ ಅಧಿಕ ಕಾಲದಿಂದ ಬಂಧನದಲ್ಲಿದ್ದು,ಇವರ ಬಿಡುಗಡೆಯ ಬಳಿಕ ನಮ್ಮಲ್ಲೀಗ ಒಟ್ಟೂ 457 ಭಾರತೀಯ ಕೈದಿಗಳು ಉಳಿದುಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ಜಲಗಡಿ ಉಲ್ಲಂಘನೆ ಆರೋಪದಲ್ಲಿ ಬಂಧಿತರಾಗಿರುವ ಮೀನುಗಾರರಾಗಿದ್ದಾರೆ. ಮಾ.20ರಂದು ಇನ್ನಷ್ಟು ಭಾರತೀಯರು ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ಲಾಂಧಿ ಜೈಲಿನ ಉಪಾಧೀಕ್ಷಕ ಶಾಕಿರ್ ಶಾ ಸುದ್ದಿಗಾರರಿಗೆ ತಿಳಿಸಿದರು.
Next Story





