ವಿಜಯ ಮಲ್ಯಗೆ ಸಂಕಷ್ಟಗಳ ಸರಮಾಲೆ: 515 ಕೋಟಿ ಜಪ್ತಿ ಡಿಆರ್‌ಟಿ ಆದೇಶ

ಬೆಂಗಳೂರು,ಮಾ.7: ಈಗಾಗಲೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮದ್ಯದ ದೊರೆ ವಿಜಯ ಮಲ್ಯ ಅವರು ತನ್ನ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವಹಿವಾಟು ಪ್ರಕರಣವನ್ನು ದಾಖಲಿಸುವುದರೊಂದಿಗೆ ಹೊಸ ದೊಂದು ಸಂಕಷ್ಟ ಎದುರಿಸುತ್ತಿರುವಾಗಲೇ ಸಾಲ ವಸೂಲಿ ನ್ಯಾಯಾಧಿಕರಣ(ಡಿಆರ್‌ಟಿ)ವು ಸೋಮವಾರ ಅವರಿಗೆ ಭಾರೀ ಆಘಾತವನ್ನು ನೀಡಿದೆ. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿಯ ಸುಸ್ತಿ ಸಾಲ ಪ್ರಕರಣವು ಇತ್ಯರ್ಥಗೊಳ್ಳುವವರೆಗೆ ಯುನೈಟೆಡ್ ಸ್ಪಿರಿಟ್ಸ್ ಉದ್ಯಮ ಸಮೂಹದಿಂದ ಹೊರನಡೆಯಲು ಡಿಯಾಜಿಯೊ ಮಲ್ಯಗೆ ಪಾವತಿಸಲಿರುವ 515 ಕೋ.ರೂ.ಗಳನ್ನು ಅವರು ಪಡೆ ದುಕೊಳ್ಳದಂತೆ ಡಿಆರ್‌ಟಿ ನಿರ್ಬಂಧ ವಿಧಿಸಿದೆ.
ಎಸ್‌ಬಿಐ ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ಡಿಆರ್‌ಟಿ ಮಲ್ಯ ಅವರಿಗೆ ಸದ್ಯಕ್ಕೆ ಯಾವುದೇ ಹಣ ಪಾವತಿಸದಂತೆ ಡಿಯಾಜಿಯೊಗೆ ಆದೇಶಿಸಿತಲ್ಲದೆ, ವಿಚಾರಣೆಯನ್ನು ಮಾ.28ಕ್ಕೆ ನಿಗದಿಗೊಳಿಸಿತು.
ಕಳೆದ ತಿಂಗಳು ಮಲ್ಯ ಮತ್ತು ಡಿಯಾಜಿಯೊ ನಡುವೆ ಒಪ್ಪಂದವೊಂದು ರೂಪುಗೊಂಡಿದೆ. ಇದರಂತೆ ಮಲ್ಯ ಅವರು ಭಾರತದ ಪ್ರಮುಖ ಮದ್ಯ ತಯಾರಿಕೆ ಕಂಪೆನಿ ಯನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದಕ್ಕಾಗಿ ಯುನೈಟೆಡ್ ಸ್ಪಿರಿಟ್ಸ್‌ನ ನೂತನ ಮಾಲಕನಾಗಿರುವ ಡಿಯಾಜಿಯೊ ಅವರಿಗೆ 515 ಕೋ.ರೂ.ಗಳನ್ನು ಪಾವತಿಸಲಿದೆ. ಕಂಪೆನಿಯಿಂದ ನಿವೃತ್ತಿಯ ಬಳಿಕ ಲಂಡನ್‌ನಲ್ಲಿ ನೆಲೆಸಲು ಮಲ್ಯ ಯೋಜಿಸಿದ್ದರು. ಸಾಲವನ್ನು ತೀರಿಸದ್ದಕ್ಕಾಗಿ ಮಲ್ಯ ವಿರುದ್ಧ ಕ್ರಮಕ್ಕೆ ಕೋರಿದ್ದ ಎಸ್‌ಬಿಐ,ಅವರ ಬಂಧನ ಮತ್ತು ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಕೋರಿ ಮೂರು ಇತರ ಅರ್ಜಿಗಳನ್ನೂ ಡಿಆರ್‌ಟಿಗೆ ಸಲ್ಲಿಸಿತ್ತು.
ಎಸ್‌ಬಿಐ ಸಾಲ ಪ್ರಕರಣ ಇತ್ಯರ್ಥಗೊಳ್ಳುವವರೆಗೆ 515 ಕೋ.ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಆರ್‌ಟಿ ಡಿಯಾಜಿಯೊವನ್ನು ಹಣ ಪಾವತಿಯಿಂದ ನಿರ್ಬಂಧಿಸಿರುವ ಆದೇಶದಲ್ಲಿ ತಿಳಿಸಿದೆ.
ಸ್ಥಗಿತಗೊಂಡಿರುವ ತನ್ನ ಕಿಂಗ್‌ಫಿಷರ್ ಏರ್‌ಲೈನ್ಸ್ ಬಾಕಿಯುಳಿಸಿಕೊಂಡಿರುವ ಸಾಲದ ಒಂದು ಬಾರಿಯ ಇತ್ಯರ್ಥಕ್ಕಾಗಿ ತಾನು ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ತನಗೆ ಸಾಲಗಾರರಿಂದ ತಪ್ಪಿಸಿಕೊಂಡು ಓಡುವ ಉದ್ದೇಶವಿಲ್ಲ ಎಂದು ಮಲ್ಯ ರವಿವಾರ ತಡರಾತ್ರಿಯಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಿಗೇ ಡಿಆರ್‌ಟಿ ಆದೇಶ ಹೊರಬಿದ್ದಿದೆ.
ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದ 17 ಬ್ಯಾಂಕುಗಳ ಒಕ್ಕೂಟದ ನೇತೃತ್ವ ವಹಿಸಿರುವ ಎಸ್‌ಬಿಐ,7,800 ಕೋ.ರೂ.ಸಾಲ ವಸೂಲಾತಿಯ ಪ್ರಯತ್ನವಾಗಿ ಏರ್‌ಲೈನ್ಸ್ ಅಧ್ಯಕ್ಷ ಮಲ್ಯ ವಿರುದ್ಧ ಡಿಆರ್‌ಟಿಯ ಮೊರೆ ಹೊಗಿದೆ. ಈ ಪೈಕಿ ಎಸ್‌ಬಿಐಗೆ 1,600 ಕೋ.ರೂ.ಬರಬೇಕಾಗಿದೆ.
ಪಿಎನ್‌ಬಿ,ಬಿಒಬಿ,ಕೆನರಾ ಬ್ಯಾಂಕ್,ಬ್ಯಾಂಕ್ ಆಫ್ ಇಂಡಿಯಾ,ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ,ಫೆಡರಲ್ ಬ್ಯಾಂಕ್,ಯುಕೊ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಮಲ್ಯಗೆ ಸಾಲ ನೀಡಿದ ಬ್ಯಾಂಕ್‌ಗಳ ಪಟ್ಟಿಯಲ್ಲಿವೆ.
ಅಕ್ರಮ ಹಣ ವಹಿವಾಟು ಪ್ರಕರಣ ದಾಖಲು
ಈ ನಡುವೆ ಜಾರಿ ನಿರ್ದೇಶನಾಲಯ(ಇಡಿ)ವು ಐಡಿಬಿಐ ಬ್ಯಾಂಕಿನಿಂದ 900 ಕೋ.ರೂ.ಸುಸ್ತಿಸಾಲಕ್ಕೆ ಸಂಬಂಧಿಸಿದಂತೆ ವಿಜಯ ಮಲ್ಯ ಮತ್ತು ಇತರರ ವಿರುದ್ಧ ಅಕ್ರಮ ಹಣ ವಹಿವಾಟು ಪ್ರಕರಣವನ್ನು ದಾಖಲಿಸಿಕೊಂಡಿದೆ.
ಇದೇ ಪ್ರಕರಣದಲ್ಲಿ ಸಿಬಿಐ ಕಳೆದ ವರ್ಷ ದಾಖಲಿಸಿಕೊಂಡಿರುವ ಎಫ್‌ಐಆರ್‌ನ ಆಧಾರದಲ್ಲಿ ಇಡಿ ಇತ್ತೀಚಿಗೆ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.
ಇಡಿಯ ಮುಂಬೈ ವಲಯ ಕಚೇರಿಯು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅಧಿಕಾರಿಗಳು ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಒಟ್ಟಾರೆ ಹಣಕಾಸು ಸ್ವರೂಪವನ್ನು ಪರಿಶೀಲಿಸುತ್ತಿದ್ದಾರೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಆರೋಪಗಳಡಿ ಪ್ರತೇಕ ತನಿಖೆಯನ್ನು ಆರಂಭಿಸಬಹುದಾಗಿದೆ ಎಂದು ಈ ಮೂಲಗಳು ಹೇಳಿದವು.
ಸಾಲಮಿತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ ಸಾಲವನ್ನು ಮಂಜೂರು ಮಾಡಲಾಗಿತ್ತೆಂದು ಆರೋಪಿಸಿರುವ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಲ್ಯ,ಏರ್‌ಲೈನ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಐಡಿಬಿಐ ಬ್ಯಾಂಕಿನ ಅಪರಿಚಿತ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು.







