ಮಂಜೇಶ್ವರ : ವಿದ್ಯುತ್ ಇಲ್ಲದ ಮನೆಗಳ ವಿದ್ಯಾರ್ಥಿಗಳಿಗೆ ಸೌರ ಲ್ಯಾಂಪ್ ವಿತರಣೆ ಯೋಜನೆಗೆ ಚಾಲನೆ
ಮಂಜೇಶ್ವರ : ವಿದ್ಯುತ್ ಸಂಪರ್ಕ ಹೊಂದದ ಮನೆಗಳಲ್ಲಿ ವಾಸಿಸುವ ಪ್ಲಸ್‌ವನ್ ಮತ್ತು ಪ್ಲಸ್ ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಸೋಲಾರ್ ಲ್ಯಾಂಪ್ ವಿತರಿಸುವ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಇದರಂತೆ ಹತ್ತು ವ್ಯಾಟ್ ಸಾಮರ್ಥ್ಯ ಹೊಂದಿರುವ ಸೋಲಾರ್ ಪ್ಯಾನಲ್ ಮತ್ತು ಏಳು ವ್ಯಾಟ್ ಸಾಮರ್ಥ್ಯದ ಸಿಎಫ್‌ಎಲ್ ಬಲ್ಬುಗಳು ಒಳಗೊಂಡ 2190 ರೂ. ಮೌಲ್ಯದ ಸೋಲಾರ್ ಲ್ಯಾಂಪ್ ವಿತರಿಸಲಾಗುವುದು.
ಒಂದು ದಿನ ಸೂರ್ಯಪ್ರಕಾಶ ಲಭಿಸಿದ್ದಲ್ಲಿ ನಾಲ್ಕರಿಂದ ಐದು ತಾಸುಗಳ ತನಕ ದೀಪ ಉರಿಯುವುದು. ಈ ಲ್ಯಾಂಪ್‌ಗೆ ಐದು ವರ್ಷ ಮತ್ತು ಅದರ ಬ್ಯಾಟರಿಗೆ ಎರಡು ವರ್ಷ ವಾರಂಟಿ ನೀಡಲಾಗುವುದು. ಈ ಯೋಜನೆಯ ರಾಜ್ಯಮಟ್ಟದ ಉದ್ಘಾಟನೆಯನ್ನು ತಿರುವನಂತಪುರದಲ್ಲಿ ಶಾಸಕ ಕೆ.ಮುರಳೀಧರನ್ ನೆರವೇರಿಸಿದ್ದಾರೆ.
ಇದರ ಹೊರತಾಗಿ ಬ್ಯಾಟರಿ ಇಲ್ಲದೆ ಗ್ರೀಡ್‌ನೊಂದಿಗೆ ಸಂಪರ್ಕಿಸುವ ಗ್ರೀಡ್ ಕನೆಕ್ಟೆಡ್ ಸೋಲಾರ್ ಪವರ್‌ಪ್ಲಾಂಟ್ ಸ್ಥಾಪಿಸುವ ಸೌರ ಯೋಜನೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗಿದೆ. ಈ ಯೋಜನೆಯಂತೆ 2ರಿಂದ 50ರ ತನಕ ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿರುವ ಗ್ರೀಡ್ ಪವರ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗುವುದು. ಬ್ಯಾಟರಿ ಇಲ್ಲದೆ ಕಾರ್ಯವೆಸಗುವ ಇದರಲ್ಲಿ ಹಗಲು ಉತ್ಪಾದಿಸುವ ವಿದ್ಯುತ್‌ನ್ನು ನೇರವಾಗಿ ವಿದ್ಯುನ್ಮಂಡಳಿಯ ಗ್ರೀಡ್‌ಗೆ ನೀಡಲಾಗುವುದು. ಹೀಗೆ ನೀಡಲಾಗುವ ವಿದ್ಯುತ್‌ಗೆ ವಿದ್ಯುನ್ಮಂಡಳಿ ನಿಗದಿತ ಬೆಲೆ ನೀಡಲಿದೆ. ಗ್ರೀಡ್ ಕನೆಕ್ಟೆಡ್ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಲು 72 ಸಾವಿರ ರೂ. ಕೇಂದ್ರ ಸರಕಾರ ಮತ್ತು 10 ಸಾವಿರ ರೂಪಾಯಿ ರಾಜ್ಯ ಸರಕಾರದಿಂದ ಸಬ್ಸಿಡಿ ಲಭಿಸಲಿದೆ. ಅನರ್ಟ್‌ನ ಆಶ್ರಯದಲ್ಲಿ ಈ ಸೌರಪ್ರಿಯ ಮತ್ತು ಸೌರವಲಯ ಯೋಜನೆಗಳೂ ಕಾರ್ಯವೆಸಗಲಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಗಳು ಅನರ್ಟ್ ಕೇಂದ್ರಗಳಿಂದ ಲಭಿಸಲಿದೆ.





