ಪುತ್ತೂರು: ಕರ್ತವ್ಯಕ್ಕೆ ಅಡ್ಡಿ, ದೂರು; ಹಲ್ಲೆ ಆರೋಪ, ಪ್ರತಿದೂರು
ಪುತ್ತೂರು: ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಪರಸ್ಪರ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪುತ್ತೂರು ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಓರ್ವರು ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿನ ವ್ಯಕ್ತಿಯೊಬ್ಬರ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಇದರ ಬೆನ್ನಿಗೆ ತನ್ನ ಮೇಲೆ ಎಂಜಿನಿಯರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ ಘಟನೆ ಶನಿವಾರ ನಡೆದಿದೆ. ನಿಡ್ಪಳ್ಳಿಯಲ್ಲಿ ಸರಕಾರಿ ಸ್ಥಳದಲ್ಲಿ ರಸ್ತೆ ನಿರ್ಮಾಣಗೊಳಿಸಲು ಸರ್ವೇ ನಡೆಸುತ್ತಿದ್ದ ಪುತ್ತೂರು ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್ ಅವರ ಕರ್ತವ್ಯಕ್ಕೆ ಸ್ಥಳೀಯ ನಿವಾಸಿ ರುಕ್ಮಯ ಎಂಬವರು ಅಡ್ಡಿ ಪಡಿಸಿರುವುದಾಗಿ ಪ್ರಮೋದ್ ಕುಮಾರ್ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲೆ ಎಂಜಿನಿಯರ್ ಪ್ರಮೋದ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ರುಕ್ಮಯ ಅವರು ಪೊಲೀಸರಿಗೆ ದೂರು ನೀಡಿದ್ದು, ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರುಕ್ಮಯ್ಯ ಮತ್ತು ಎಂಜಿನಿಯರ್ ಪ್ರಮೋದ್ ಕುಮಾರ್ ಇಬ್ಬರ ದೂರನ್ನು ಸ್ವೀಕರಿಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





