ಹಾರ್ಲೆ ಡೇವಿಡ್ಸನ್ ನಲ್ಲಿ ಸಂಸತ್ತಿಗೆ ಬಂದ ಮಹಿಳಾ ಸಂಸದೆ !
ಈಕೆ ಸಂಸದ ಪಪ್ಪು ಯಾದವ್ ರ ಪತ್ನಿ

ಹೊಸದಿಲ್ಲಿ , ಮಾ. ೮: ಅದು ಸಂಸತ್ತಿನಲ್ಲಿ ಯಾವತ್ತೂ ನೋಡಲು ಸಿಗುವ ದೃಶ್ಯವಲ್ಲ. ಮಂಗಳವಾರ ಬೆಳಗ್ಗೆ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯೆ ರಂಜೀತ್ ರಂಜನ್ ತಮ್ಮ ಕಿತ್ತಳೆ ಬಣ್ಣದ ದುಬಾರಿ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಸಂಸತ್ತಿಗೆ ಬಂದಾಗ ಅಲ್ಲಿದ್ದವರಿಗೆಲ್ಲಾ ಅಚ್ಚರಿ !
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಂಜನ್ ಈ ಹೊಸ ರೀತಿಯಲ್ಲಿ ಸದನಕ್ಕೆ ಬಂದು ದಿನದ ಕಲಾಪದಲ್ಲಿ ಹಾಜರಾದರು.
ಬಿಹಾರದ ಸುಪೌಲ್ ಕ್ಷೇತ್ರವನ್ನು ಪ್ರತಿನಿಧಿಸುವ ರಂಜೀತ್ ರಂಜನ್ ಕಡು ನೀಲಿ ಬಣ್ಣದ ಧಿರಿಸಿನಲ್ಲಿ , ಹೆಲ್ಮೆಟ್ ಹಾಗು ಸ್ಯಾನ್ ಗ್ಲಾಸ್ ಗಳನ್ನೂ ಹಾಕಿಕೊಂಡು ವಿಲಾಸಿ ಹಾರ್ಲೆ ಡೇವಿಡ್ಸನ್ ನಲ್ಲಿ ಬಂದು ಎಲ್ಲರ ಗಮನ ಸೆಳೆದರು. ಪತ್ರಕರ್ತರು ಹಾಗು ಛಾಯಾಚಿತ್ರಗ್ರಾಹಕರು ಅವರ ಮೇಲೆ ಮುಗಿಬಿದ್ದರು.
ತನ್ನ ಸಂಪಾದನೆಯಿಂದಲೇ ತಾನು ಈ ಬೈಕನ್ನು ಖರೀದಿಸಿದೆ ಎನ್ನುವ ಈ ಎರಡು ಮಕ್ಕಳ ತಾಯಿ ತನ್ನ ಪತಿ ಹಾಗು ಸಂಸದ ರಾಜೇಶ್ ರಂಜನ್ (ಪಪ್ಪು ಯಾದವ್) ಅವರಿಗೂ ಈ ಬೈಕ್ ಮುಟ್ಟಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಹಿಂಬದಿ ಸವಾರನಾಗಿ ಪತಿಯನ್ನು ಕರೆದುಕೊಂಡು ಹೋಗಬಹುದು !







